ಬೆಂಗಳೂರು: ನಗರದ ಕಲುಷಿತ ಕೆರೆಗಳ ಪುನಶ್ಚೇತನ ಹಾಗೂ ಸಂರಕ್ಷಣೆಗೆ ರಾಷ್ಟ್ರೀಯ ಪರಿಸರ ಅಧ್ಯಯನ ಸಂಶೋಧನಾ ಸಂಸ್ಥೆಯನ್ನು (ನೀರಿ) ಮಾಡಿರುವ ಶಿಫಾರಸುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ನಡೆಗೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಕೆರೆಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಸಿಟಿಜನ್ ಆ್ಯಕ್ಷನ್ ಗ್ರೂಪ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ನೀರಿ ಮಾಡಿದ್ದ ಶಿಫಾರಸುಗಳಲ್ಲಿ ಕೆಲವನ್ನು ಬದಲಾಯಿಸಬೇಕು ಎಂದು ಅರ್ಜಿದಾರರಲ್ಲಿ ಒಬ್ಬರಾದ ನಿಯೋ ಸಾಲ್ದಾನ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನೀರಿ ನೀಡಿರುವ ಸಲಹೆ ಹಾಗೂ ಶಿಫಾರಸುಗಳ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಒಳಗೊಂಡು ದೇಶದ ಹಲವು ಹೈಕೋರ್ಟ್ಗಳು ಆದೇಶ ಹೊರಡಿಸಿವೆ. ನೀರಿ ತಜ್ಞರ ಸಮಿತಿಯಾಗಿದ್ದು, ಅವರು ನೀಡುವ ಶಿಫಾರಸುಗಳು ಗುಣಮಟ್ಟದ್ದಾಗಿರುತ್ತವೆ. ಹೀಗಿದ್ದೂ ನೀವು ನೀರಿ ಶಿಫಾರಸು ಸೂಕ್ತವಲ್ಲ ಎಂದರೆ ನಾವು ಹೇಗೆ ನಿರ್ಧರಿಸುದು ಎಂದು ಪ್ರಶ್ನಿಸಿತು.
ಓದಿ: ಟ್ರಾಫಿಕ್ ಪೊಲೀಸರು ಸಂಗ್ರಹಿಸುವ ದಂಡದ ಮೊತ್ತ: ವಿವರ ಕೋರಿ ಹೈಕೋರ್ಟ್ಗೆ ಪಿಐಎಲ್
ಅರ್ಜಿದಾರರು ಮತ್ತೆ ವಾದಿಸಿ, ನಾವು ನೀರಿ ಸಲಹೆಗಳು ಸರಿ ಇಲ್ಲ ಎನ್ನುತ್ತಿಲ್ಲ. ಬದಲಿಗೆ ಕೆಲವೊಂದು ಶಿಫಾರಸುಗಳನ್ನು ಮಾರ್ಪಡಿಸುವ ಅಗತ್ಯವಿದೆ ಎಂದರು. ಅರ್ಜಿದಾರರ ವಾದಕ್ಕೆ ಬೇಸರ ವ್ಯಕ್ತಪಡಿಸಿದ ಪೀಠ, ಹಲವು ಸ್ವಯಂಘೋಷಿತ ತಜ್ಞರು, ನೀರಿಯಂತಹ ತಜ್ಞ ಸಮಿತಿಗಳ ಶಿಫಾರಸುಗಳನ್ನು ಪ್ರಶ್ನಿಸುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇಂತಹ ಆಕ್ಷೇಪಗಳನ್ನು ನಿರ್ಧರಿಸಲು ನಾವು ತಜ್ಞರಲ್ಲ. ನಾವು ತಜ್ಞರಾಗಿದ್ದರೆ ನೀರಿಗೆ ಏಕೆ ಕೇಳಬೇಕಿತ್ತು. ಎಲ್ಲರೂ ಒಂದೊಂದು ಸಲಹೆ ನೀಡುತ್ತಾ ಹೋದರೆ ಕಾಲ ವಿಳಂಬವಾಗುತ್ತದೆ. ಜತೆಗೆ ಮೂಲ ಉದ್ದೇಶವೇ ವಿಳಂಬವಾಗುತ್ತದೆ.
ಹಾಗಿದ್ದೂ ನೀವು ಒಂದು ವೇಳೆ ನೀರಿಯ ಸಲಹೆ ಶಿಫಾರಸುಗಳನ್ನು ಪ್ರಶ್ನಿಸುವುದಾದರೆ ಮಧ್ಯಂತರ ಅರ್ಜಿ ಸಲ್ಲಿಸಿ. ವಿಚಾರಣೆ ನಡೆಸೋಣ. ಆದರೆ, ಅರ್ಜಿ ಸಲ್ಲಿಸುವಾಗ ನೀರಿ ಸಲಹೆ ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ. ಆಗದಿದ್ದಲ್ಲಿ ವಿಳಂಬದಿಂದಾಗುವ ಎಲ್ಲಾ ಪರಿಣಾಮಗಳಿಗೆ ನೀವು ಜವಾಬ್ದಾರರಾಗುತ್ತೀರೆಂದು ಪ್ರಮಾಣಪತ್ರ ಸಲ್ಲಿಸಿ ಎಂದು ಮೌಖಿಕವಾಗಿ ತಾಕೀತು ಮಾಡಿ ವಿಚಾರಣೆಯನ್ನು ನಾಳೆ ಮಧ್ಯಾಹ್ನಕ್ಕೆ ಮುಂದೂಡಿತು.