ಬೆಂಗಳೂರು:ಲೋಕಾಯುಕ್ತ ಸಂಸ್ಥೆ ವಿಚಾರಣೆಯನ್ನು ಕೈಗೊಂಡು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಆದರೆ, ಸೀಮಿತ ಫಲಿತಾಂಶ ಮಾತ್ರ ಬಂದಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ವಿಷಾದ ವ್ಯಕ್ತಪಡಿಸಿದರು.
2023ನೇ ಸಾಲಿನ ಜಾಗೃತ ಅರಿವು ಸಪ್ತಾಹದ ಅಂಗವಾಗಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನಮ್ಮ ಲೋಕಾಯುಕ್ತ ಸಂಸ್ಥೆಯಿಂದ ಅನೇಕ ಸರ್ಕಾರಿ ಕಚೇರಿಗಳ ಮತ್ತು ಸಂಸ್ಥೆಗಳ ಮೇಲೆ ದಾಳಿ ನಡೆಸಿ ವಿಚಾರಣೆಯನ್ನು ಕೈಗೊಂಡು ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಲಾಗಿದೆ. ಆದರೆ, ಈ ಬಗ್ಗೆ ಸೀಮಿತ ಫಲಿತಾಂಶ ಮಾತ್ರ ಬಂದಿದೆ. ಈ ಬಗ್ಗೆ ಸಮಗ್ರ ಪರಿವರ್ತನೆ ಆಗತ್ಯವಿದೆಯೆಂದು ತಿಳಿಸಿದರು.
ಲೋಕಾಯುಕ್ತ ಸಂಸ್ಥೆಯು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಯಿಂದ ಮಾತ್ರವೇ ಭ್ರಷ್ಟಾಚಾರ ಹೋಗಲಾಡಿಸಲು ಅಥವಾ ದುರಾಡಳಿತವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಈ ಸಂಸ್ಥೆಯಿಂದ ದೂರುಗಳ ಬಗ್ಗೆ ತನಿಖೆ ಕೈಗೊಂಡು ಮೇಲ್ನೋಟಕ್ಕೆ ಆಪಾದನೆಗಳು ಸತ್ಯವೆಂದು ಕಂಡು ಬಂದ ಪ್ರಕರಣಗಳಲ್ಲಿ ಕಳುಹಿಸಿದ ಅನೇಕ ಶಿಫಾರಸುಗಳು ಸರ್ಕಾರದ ಮಟ್ಟದಲ್ಲಿಯೇ ಬಾಕಿ ಉಳಿದಿವೆ. ಈ ಬಗ್ಗೆ ಇಲಾಖಾ ಮುಖ್ಯಸ್ಥರು ಗಮನ ಹರಿಸಿ ಸೂಕ್ತ ಕ್ರಮ ಕೈಗೊಂಡಲ್ಲಿ ದುರಾಡಳಿತವನ್ನು ಹೋಗಲಾಡಿಸಲು ಸಾಧ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
1074 ಪ್ರಕರಣ ಇನ್ನೂ ಸರ್ಕಾರ ಹಂತದಲ್ಲಿ ಬಾಕಿ: ಇಲಾಖಾ ವಿಚಾರಣೆ ಪ್ರಕರಣಗಳಲ್ಲಿ ಆಪಾದನೆಗಳು ಸಾಬೀತಾಗಿ ದಂಡನೆ ವಿಧಿಸಲು ಶಿಫಾರಸು ಮಾಡಲಾದ 1074 ಪ್ರಕರಣಗಳು ಇನ್ನೂ ಸರ್ಕಾರದ ಹಂತದಲ್ಲಿ ಬಾಕಿ ಇವೆ ಎಂದು ತಿಳಿಸಿದರು.
ಒಂದು ಪ್ರಕರಣವನ್ನು ಉಲ್ಲೇಖಿಸುತ್ತಾ, ಶಿಫಾರಸು ಮಾಡಲಾದ ಒಂದು ಪ್ರಕರಣದಲ್ಲಿ ಆಪಾದಿತ ಅಧಿಕಾರಿಯ ಸೇವೆಯು ಇನ್ನೂ ಎರಡು ವರ್ಷಗಳಿದ್ದಾಗಲೇ ಮಾಡಿದ್ದರೂ ಸಹ ಆ ಅಧಿಕಾರಿಯು ನಿವೃತ್ತಿಯಾಗುವ ವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ನಿವೃತ್ತಿಯ ನಂತರ ಅವರ ಪಿಂಚಣಿಯನ್ನು ತಡೆಹಿಡಿಯಲಾಗಿದೆ.
ಆ ಅಧಿಕಾರಿ ಎರಡು ವರ್ಷಗಳ ಕಾಲ ಸೇವೆಯಲ್ಲಿ ಮುಂದುವರೆದು ಮಾಡಿರಬಹುದಾದ ದುರಾಡಳಿತವನ್ನು ಊಹಿಸಲು ಸಾಧ್ಯವಾಗುವುದಿಲ್ಲ. ಈ ರೀತಿಯ ವಿಳಂಬ ಸಹ ಕರ್ತವ್ಯ ಲೋಪ ಮತ್ತು ದುರಾಡಳಿತದ ಪರಮಾವಧಿಯಾಗುವುದು ಎಂದು ಮಾಹಿತಿ ನೀಡಿದರು.
ಸರ್ಕಾರಿ ನೌಕರರ ಆಸ್ತಿ ವಿವರ ಆನ್ ಲೈನ್ ನಲ್ಲಿ ಘೋಷಿಸಬೇಕು:ಲೋಕಾಯುಕ್ತ ಪೊಲೀಸರಿಗೆ ಆನ್‌ಲೈನ್ ಮೂಲಕ ಸರ್ಕಾರಿ ನೌಕರರ ವೇತನ ವಿವರಗಳನ್ನು ಪರಿಶೀಲಿಸಲು ಅವಕಾಶವನ್ನು ಒದಗಿಸಿದಲ್ಲಿ ಲೋಕಾಯುಕ್ತ ಪೊಲೀಸ್ ಕರ್ತವ್ಯಗಳನ್ನು ಇನ್ನೂ ಸುಗಮವಾಗಿ ನಡೆಸಬಹುದು. ಇಲ್ಲಿಯವರೆಗೆ IAS ಮತ್ತು IPS ಅಧಿಕಾರಿಗಳು, ಅವರ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಘೋಷಿಸಲು ಮತ್ತು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಮಾಡಲಾಗಿದೆ. ಆದರೆ, ರಾಜ್ಯ ಅಧಿಕಾರಿಗಳ ವಿಷಯದಲ್ಲಿಯೂ ಈ ರೀತಿ ಮಾಡಬೇಕೆಂದು ಒತ್ತಾಯಿಸಿದರು.
ಭ್ರಷ್ಟಾಚಾರ ತಡೆ ಕಾಯಿದೆ, 1988 ರ ಸೆಕ್ಷನ್ 19 ಅಡಿ ಮಾಡಿದ ಪ್ರಾಸಿಕ್ಯೂಷನ್ ಸ್ಯಾಂಕ್ಷನ್ ಆರ್ಡರ್ ಅನುಸಾರವಾಗಿ ಪೊಲೀಸರು ಪೂರ್ಣಗೊಳಿಸಿದ ತನಿಖೆಗೆ ಸಂಬಂಧಿಸಿದಂತೆ ಮತ್ತೊಂದು ವಿಚಾರಣೆ ತಪ್ಪಿಸಬೇಕೆಂದು ತಿಳಿಸಿದರು.
ಲಂಚ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಅಧಿಕಾರಿಗಳನ್ನು ಬಂಧಿಸಿ ಅಮಾನತುಗೊಳಿಸಿದ ನಂತರ ಅಧಿಕಾರಿಯ ಅಮಾನತು ಹಿಂಪಡೆದ ಮೇಲೆ ಹೆಚ್ಚಿನ ಪ್ರಕರಣಗಳಲ್ಲಿ ಸದರಿ ಅಧಿಕಾರಿಗೆ ಅದೇ ಹುದ್ದೆಗೆ ನಿಯೋಜಿಸುವುದು ಬಹಳಷ್ಟು ಪ್ರಕರಣಗಳಲ್ಲಿ ಗಮನಕ್ಕೆ ಬಂದಿದೆ ಎಂದು ವಿವರಿಸಿದರು.
ಲಂಚವನ್ನು ಸ್ವೀಕರಿಸುವಾಗ ಸರ್ಕಾರಿ ನೌಕರ ಸಿಕ್ಕಿಬಿದ್ದರೆ, ಅವನು ಕ್ರಿಮಿನಲ್ ಪ್ರಕರಣದ ವಿಚಾರಣೆಯಲ್ಲಿ ಆತ ಪುರಾವೆಯ ಲಭ್ಯತೆ ಇಲ್ಲದಿರುವ ಕಾರಣ ಖುಲಾಸೆಯಾಗಬಹುದು. ಆದರೆ, ಕರ್ನಾಟಕ ಸಿವಿಲ್ ಸರ್ವೀಸಸ್ (ಸಿಸಿಎ) ನಿಯಮಗಳಡಿ ನಡೆಸಿದ ವಿಚಾರಣೆಯಲ್ಲಿ, ಅನೇಕ ಪ್ರಕರಣಗಳಲ್ಲಿ ಸಾಕ್ಷಿಗಳು ಪ್ರತಿಕೂಲವಾಗಿ ತಿರುಗಿದರೂ ಸಹ ಸಂಭವನೀಯತೆಯ ಆಧಾರದ ಮೇಲೆ ಪ್ರಕರಣದ ಸಾಂದರ್ಬಿಕ ಸಾಕ್ಷ್ಯಗಳನ್ನು ಗಮನದಲ್ಲಿಟ್ಟುಕೊಂಡು ದಂಡವನ್ನು ವಿಧಿಸಲು ಶಿಫಾರಸು ಮಾಡಲಾಗುವುದು.
ಅಂತಹ ಸಂದರ್ಭಗಳಲ್ಲಿ, ಕ್ರಿಮಿನಲ್ ಮೊಕದ್ದಮೆಯಲ್ಲಿ ಅವನು ತಪ್ಪಿತಸ್ಥನೆಂದು ಕಂಡುಬಂದಿಲ್ಲ ಎಂಬ ಕಾರಣಕ್ಕಾಗಿ ಸಕ್ಷಮ ಪ್ರಾಧಿಕಾರ/ಸರ್ಕಾರ ಅವನನ್ನು ಖುಲಾಸೆ ಮಾಡಿರುವ ಪ್ರಕರಣಗಳು ಗಮನಕ್ಕೆ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದನ್ನೂಓದಿ:"ರಾಜಣ್ಣ ಹೇಳಿಕೆಗೆ ನಾನು ಉತ್ತರ ನೀಡಲು ಹೋಗುವುದಿಲ್ಲ.. ನಾನೊಂದು ಹೇಳಿದರೆ ನೀವೇ ಒಂದು ಬರೆಯುತ್ತೀರಿ": ಸಿಎಂ