ಬೆಂಗಳೂರು: ಗ್ರಾಮ ಪಂಚಾಯತ್ಗಳಿಗೆ ಸದಸ್ಯರ ನಾಮನಿರ್ದೇಶನ ಮಾಡಲು ಅವಕಾಶ ನೀಡುವಂತೆ ಹಾಗೂ ಪಂಚಾಯತ್ನ ಚುನಾವಣೆ ನಡೆಸಲು ಸರ್ಕಾರಕ್ಕೆ ಸೂಚನೆ ನೀಡುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ಭೇಟಿ ಕೊಟ್ಟಿತ್ತು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್, ಮಾಜಿ ಸಚಿವ ಹೆಚ್.ಕೆ. ಪಾಟೀಲ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವು ನಾಯಕರು ಇವರಿಗೆ ಸಾಥ್ ನೀಡಿದರು.
ಚುನಾವಣಾ ಆಯುಕ್ತರ ಭೇಟಿ ನಂತರ ಮಾತನಾಡಿದ ಸಿದ್ದರಾಮಯ್ಯ, ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಕೋವಿಡ್ -19 ನೆಪವನ್ನು ಮುಂದಿಟ್ಟು ಚುನಾವಣೆ ಮುಂದೂಡುವ ಹುನ್ನಾರ ನಡೆಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಸಂವಿಧಾನ ಹಾಗೂ ಪಂಚಾಯತ್ ರಾಜ್ ಕಾಯ್ದೆಯನ್ನು ಉಲ್ಲಂಘನೆ ಮಾಡಲು ಹೊರಟಿದ್ದು, ಈ ವಿಷಯವನ್ನು ಚುನಾವಣಾ ಆಯುಕ್ತರ ಗಮನಕ್ಕೆ ತಂದಿದ್ದೇವೆ ಎಂದರು.
ಒಮ್ಮೆ ಆಯ್ಕೆಯಾದ ಸದಸ್ಯರ ಕಾಲಾವಧಿ ಐದು ವರ್ಷ ಇರುತ್ತದೆ. ಈಗಾಗಲೇ ಆಯ್ಕೆಯಾಗಿರುವ ಸದಸ್ಯರ ಅವಧಿ ಮುಕ್ತಾಯವಾಗಿದ್ದು, ಚುನಾವಣಾ ಪ್ರಕ್ರಿಯೆ ಆರಂಭವಾಗಬೇಕಿತ್ತು. ಸೆಕ್ಷನ್ 308 ಎಎ ಗ್ರಾಮ ಪಂಚಾಯತ್ ಕಾಯ್ದೆಯಡಿ ಈಗಾಗಲೇ ಮೀಸಲಾತಿಯನ್ನು, ಚುನಾವಣೆ ದಿನಾಂಕ ಕೂಡ ಘೋಷಣೆ ಮಾಡಬೇಕಿತ್ತು. ಆದರೆ ಆಯೋಗ ಇದ್ಯಾವ ಕೆಲಸವನ್ನು ಮಾಡಿಲ್ಲವೆಂದು ದೂರಿದರು.
ಈ ನಡುವೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರ ನಡವಳಿಕೆ ನಮಗೆ ಅನುಮಾನ ತರಿಸಿದ್ದು, ಚುನಾವಣಾ ಆಯೋಗದ ಮೇಲೆ ರಾಜ್ಯ ಸರ್ಕಾರ ಪ್ರಭಾವ ಬೀರಿರುವ ಶಂಕೆ ಉಂಟಾಗಿದೆ. ಈ ಹಿನ್ನೆಲೆ ಸಾಕಷ್ಟು ಅನುಮಾನಗಳು ಮೂಡಿದ ಬೆನ್ನಲ್ಲೇ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದೇವೆ. ಚುನಾವಣೆ ಆಗಲೇಬೇಕು, ಯಾವುದೇ ಕಾರಣಕ್ಕೂ ಮುಂದೂಡಲು ಸರ್ಕಾರ ಅಥವಾ ಚುನಾವಣಾ ಆಯೋಗಕ್ಕೆ ಸಾಧ್ಯವಿಲ್ಲ. ಆದಷ್ಟು ಬೇಗ ಚುನಾವಣೆ ನಡೆಸಿ ಎಂದು ಒತ್ತಾಯಿಸಿದ್ದೇವೆ. ಚುನಾವಣಾ ಆಯುಕ್ತರು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಪಂಚಾಯತ್ ಚುನಾವಣೆಯಲ್ಲಿ ಯಾವುದೇ ಪಕ್ಷ ಅಥವಾ ಚಿಹ್ನೆ ಮೇಲೆ ಚುನಾವಣೆ ನಡೆಯುವುದಿಲ್ಲ. ಆದರೆ ಬಿಜೆಪಿ ಇಲ್ಲಿ ತನ್ನ ಅಧಿಕಾರ ಸಾಧಿಸಲು ಹೊರಟಿದೆ. ಇದಕ್ಕಾಗಿ ಉಪ ಆಯುಕ್ತರನ್ನು ದುರುಪಯೋಗಪಡಿಸಿಕೊಳ್ಳುವ ಕಾರ್ಯ ಮಾಡುತ್ತಿದೆ. ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಮುಂಚಿತವಾಗಿ ತಿಳಿಸಿ ಸಚಿವ ಸಂಪುಟ ಸಭೆಯಲ್ಲಿ ತಮಗೆ ಬೇಕಾದ ನಿರ್ಧಾರವನ್ನು ಕೈಗೊಂಡಿದ್ದಾರೆ. ಪ್ರಜಾಪ್ರಭುತ್ವವನ್ನು ಮುಗಿಸಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಗ್ರಾಮಪಂಚಾಯತ್ಗೆ ನೇಮಿಸುವ ಕಾರ್ಯಕ್ಕೆ ಬಿಜೆಪಿ ಮುಂದಾಗಿದೆ. ಇದನ್ನು ಸುಲಭವಾಗಿ ನಾವು ಬಿಡುವುದಿಲ್ಲ, ಇವರ ವಿರುದ್ಧ ಸಮರ್ಥ ಹೋರಾಟ ನಡೆಸಲಿದ್ದು, ಸಮಯ ಬಂದಾಗ ತಿಳಿಸುತ್ತೇನೆಂದರು.
ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದು, ನೀವು ಸರ್ಕಾರಕ್ಕಿಂತಲೂ ಮೇಲ್ಮಟ್ಟದಲ್ಲಿ ಇದ್ದೀರಿ. ಸರ್ಕಾರದ ಯಾವುದೇ ನಿರ್ಧಾರವನ್ನು ಪ್ರಶ್ನಿಸುವ ಅಧಿಕಾರ ನಿಮಗಿದೆ. ನೀವು ಸಂವಿಧಾನವನ್ನು ರಕ್ಷಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದ್ದು, ಈ ಕಾರ್ಯ ಮಾಡುವುದಾಗಿ ಅವರು ನಮಗೆ ಭರವಸೆ ನೀಡಿದ್ದಾರೆ. ಚುನಾವಣಾ ಆಯುಕ್ತರನ್ನು ಕೂಡಾ ನಾವು ಗಮನಿಸುತ್ತೇವೆ, ಅವರು ಹಾದಿ ತಪ್ಪಿದಲ್ಲಿ ದೊಡ್ಡಮಟ್ಟದ ಹೋರಾಟಕ್ಕೆ ಮುಂದಾಗುತ್ತೇವೆ. ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಕರ್ನಾಟಕ ಕಾರ್ಯ ನಿರ್ವಹಿಸಿಕೊಂಡು ಹೋಗಿದ್ದು, ಇದು ಮುಂದುವರಿಯಲಿದೆ ಎಂಬ ವಿಶ್ವಾಸ ನಮಗಿದೆ. ಸರ್ಕಾರ ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲು ಮುಂದಾದರೆ ಮುಂದಿನ ದಿನಗಳಲ್ಲಿ ನಾವು ನಡೆಸುವ ಹೋರಾಟದ ರೂಪುರೇಷೆಗಳನ್ನು ವಿವರಿಸಲಿದ್ದೇವೆ ಎಂದರು.