ಬೆಂಗಳೂರು: ರಾಜ್ಯದಲ್ಲಿ ನೆರೆಯಿಂದಾಗಿ ಉಂಟಾಗಿರುವ ಸಮಸ್ಯೆಯ ಚರ್ಚೆಗೆ ವಿಶೇಷ ಅಧಿವೇಶನ ಕರೆಯುವಂತೆ ಕಾಂಗ್ರೆಸ್ ನಾಯಕರ ಒತ್ತಡ ಸರ್ಕಾರದ ಮೇಲೆ ಹೆಚ್ಚಾಗಿದೆ.
ರಾಜ್ಯದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಅತಿವೃಷ್ಟಿ ಹಾಗೂ ನೆರೆ ಸಮಸ್ಯೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಈ ಕುರಿತು ಚರ್ಚಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯುವಂತೆ ನಿನ್ನೆ ಕಲಬುರ್ಗಿಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದರು.
ಇದೀಗ ಇವರ ಹೇಳಿಕೆಗೆ ಬೆಂಬಲ ಸೂಚಿಸುವಂತೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ವಿಶೇಷ ಅಧಿವೇಶನ ಕರೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಮಳೆ ಪ್ರವಾಹದಿಂದ ಜನರ ಬದುಕು ಬೀದಿಗೆ ಬಂದಿದೆ. ಸರ್ಕಾರ ನೆರೆ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಪ್ರವಾಹದ ಬಗ್ಗೆ ವಿಸ್ತೃತ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯಬೇಕು ಎನ್ನುವ ಸಿದ್ದರಾಮಯ್ಯ ಮಾತಿಗೆ ನನ್ನ ಸಹಮತವಿದೆ. ಮುಖ್ಯಮಂತ್ರಿಗಳು ಈ ಕೂಡಲೇ ವಿಶೇಷ ಅಧಿವೇಶನ ಕರೆಯಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ದಸರೆಗೆ ಹಳೆಯ ವೈಭವ ಬರಲಿ:
ಕೊರೊನಾದಿಂದಾಗಿ ಗತವೈಭವ ಕಳೆದುಕೊಂಡಿರುವ ಮೈಸೂರು ದಸರಾ ಮತ್ತೆ ವೈಭವ ಕಾಣಲಿ ಎಂದು ಟ್ವೀಟ್ ಮೂಲಕ ಆಶಿಸಿರುವ ದಿನೇಶ್ ಗುಂಡೂರಾವ್, 450 ವರ್ಷಗಳ ಇತಿಹಾಸ ಮತ್ತು ಪರಂಪರೆ ಇರುವ ಮೈಸೂರು ದಸರಾ ಉತ್ಸವದ ಆಡಂಬರದ ಆಚರಣೆಗೆ ಈ ಬಾರಿ ಕೋವಿಡ್ ಕರಿನೆರಳು ಬಿದ್ದಿರುವುದು ಬೇಸರದ ಸಂಗತಿ. ಮುಂದಿನ ವರ್ಷದಿಂದ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಮೈಸೂರು ದಸರಾ ಮಹೋತ್ಸವ ಹಳೆಯ ವೈಭವಕ್ಕೆ ಮರಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.