ಬೆಂಗಳೂರು: ಕೇಂದ್ರ ಸರ್ಕಾರ ನಿರಂತರವಾಗಿ ಇಂಧನ ಬೆಲೆ ಹೆಚ್ಚಳ ಮಾಡುತ್ತಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಪಕ್ಷ, ಸತತ ಎಂಟು ದಿನಗಳಿಂದ ಪೆಟ್ರೋಲ್ - ಡೀಸೆಲ್ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಇದು ದೇಶೀ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಹಣದುಬ್ಬರಕ್ಕೆ ಕಾರಣವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ತನ್ನ ಬೊಕ್ಕಸ ತುಂಬಿಕೊಳ್ಳಲು ದೇಶದ ಆರ್ಥಿಕತೆನ್ನು ಮತ್ತಷ್ಟು ಹೀನಾಯ ಸ್ಥಿತಿಗೆ ಗುರಿಮಾಡುತ್ತಿದೆ ಎಂಬ ಆರೋಪ ಮಾಡಿದೆ.
ನಿರಂತರ ಇಂಧನ ಶುಲ್ಕ ಹೆಚ್ಚಳವು ರಾಜ್ಯದ ಸಾರ್ವಜನಿಕ, ಸಾರಿಗೆ ಕ್ಷೇತ್ರದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಇದು ಕಾರಣವಾಗಿದೆ. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಬೆಲೆ ಏರಿಕೆಯ ಅಗತ್ಯವಿತ್ತೆ? ಜನರ ಆರ್ಥಿಕ ಸ್ಥಿತಿ ಸುಧಾರಣೆಗೆ ಕೇಂದ್ರ ಸರ್ಕಾರದ ಕಾರ್ಯಕ್ರಮಗಳೇನು? ಎಂದು ಸವಾಲು ಹಾಕಿದೆ.
ಕಾಂಗ್ರೆಸ್ ಪಕ್ಷ 2013ರಲ್ಲಿ ಅಧಿಕಾರದಲ್ಲಿದ್ದ ಸಂದರ್ಭ ಕಚ್ಚಾತೈಲ ಬೆಲೆ - 98 ಡಾಲರ್ ಇತ್ತು, ಹಾಗೂ ಇಂಧನ ಬೆಲೆ 76 ರೂ. ಇತ್ತು. 2020ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಕಚ್ಚಾತೈಲ ಬೆಲೆ - 37.2 ಡಾಲರ್ ಇದೆ. ಆದರೆ ಇಂಧನ ಬೆಲೆ 76 ರೂ. ಆಗಿದೆ. ಕೇಂದ್ರ ಸರ್ಕಾರ ಜನರ ಮೇಲೆ ಅನಗತ್ಯ ಹೊರೆ ಹೊರಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಿರುವ ಪಕ್ಷ, ಕಾರ್ಮಿಕರಿಗೆ ನೀಡಬೇಕಿದ್ದ ಆಹಾರವನ್ನು ಪಕ್ಷದ ಚಿನ್ಹೆ, ನಾಯಕರ ಫೋಟೋ ಮುದ್ರಿಸಿ ನಿಮ್ಮ ಕಾರ್ಯಕರ್ತರಿಗೆ ಹಂಚಿದ್ದು ಯಾಕೆ? ಕಾರ್ಮಿಕರ ಪ್ರಯಾಣಕ್ಕೆ ದುಪ್ಪಟ್ಟು ಟಿಕೆಟ್ ದರ ವಿಧಿಸಿದ್ದು ಸರಿಯೇ? ಶ್ರಮಿಕ್ ರೈಲು ನೀಡದೆ ಅವರನ್ನು ನೂರಾರು ಕಿ.ಮೀ ನಡೆಸಿದ್ದು. ಇದೆಲ್ಲವೂ ನೀವು ಕಾರ್ಮಿಕರ ಕಣ್ಣೀರು ಒರೆಸಿದ ರೀತಿ ಎಂದಿದೆ.