ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ದಕ್ಷಿಣ ಪದವೀಧರ ಕ್ಷೇತದ ಚುನಾವಣೆ ಸಂಬಂಧ ಮೈಸೂರು ವಿಭಾಗದ ಪಕ್ಷದ ಮುಖಂಡರ ಜತೆ ಕೆಪಿಸಿಸಿ ಕಚೇರಿಯಲ್ಲಿ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಕಾರ್ಯಾಧ್ಯಕ್ಷ ಆರ್ ಧೃವನಾರಾಯಣ್, ಮೂರ್ತಿ, ಲಕ್ಷ್ಮಣ್, ಸಿ ಡಿ ಗಂಗಾಧರ್, ಜಾವಗಲ್ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು. ವಿಜಯಕುಮಾರ್, ಮರಿಸ್ವಾಮಿ ಜತೆಗಿದ್ದರು.
ದಕ್ಷಿಣ ಪದವೀಧರ, ವಾಯವ್ಯ ಪದವೀಧರ, ವಾಯವ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಇದೇ ಬರುವ ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿ ಗೆಲುವನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿರುವ ಕಾಂಗ್ರೆಸ್, ಹೆಚ್ಚು ಸದಸ್ಯರನ್ನು ಗೆಲ್ಲಿಸಿಕೊಳ್ಳುವ ಮೂಲಕ ವಿಧಾನಪರಿಷತ್‌ನಲ್ಲಿ ಕೊರತೆಯಿರುವ ಸ್ಥಾನಗಳನ್ನು ತುಂಬಿಕೊಂಡು ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ಯತ್ನಕ್ಕೆ ಮುಂದಾಗಿದೆ.
75 ಸದಸ್ಯರ ಬಲಾಬಲ ಇರುವ ವಿಧಾನಪರಿಷತ್ತಿನಲ್ಲಿ ಪಕ್ಷೇತರ ಸದಸ್ಯರು ಬೆಂಬಲವನ್ನು ಪಡೆದ ಬಿಜೆಪಿ ಒಟ್ಟು 33 ಸ್ಥಾನಗಳನ್ನು ಹೊಂದಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. 29 ಸದಸ್ಯರ ಬಲ ಹೊಂದಿರುವ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ಇದೇ ಬರುವ ಡಿಸೆಂಬರ್ನಲ್ಲಿ ಹಾಗೂ ಮುಂದಿನ ವರ್ಷ ಜನವರಿಯಲ್ಲಿ ತೆರವಾಗುವ 25 ಕ್ಷೇತ್ರಗಳ ಪೈಕಿ ಹೆಚ್ಚಿನ ಕಾಂಗ್ರೆಸ್ ಸದಸ್ಯರು ತಮ್ಮ ಅವಧಿ ಪೂರ್ಣಗೊಳಿಸುತ್ತಿದ್ದಾರೆ.
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗುವ ಹಾಗೂ ನಾಮನಿರ್ದೇಶನಗೊಂಡ ಸದಸ್ಯರ ವಿಚಾರದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಲಿದೆ. ಈ ವಿಚಾರವನ್ನು ಮನಗಂಡಿರುವ ಕಾಂಗ್ರೆಸ್ ನಾಯಕರು ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳಿಂದ ಹೆಚ್ಚಿನ ಸದಸ್ಯರನ್ನು ಗೆಲ್ಲಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನದಲ್ಲಿ ತೊಡಗಿರುವ ನಾಯಕರು ಇಂದು ವಿಜಯದಶಮಿ ಹಬ್ಬದ ರಜೆ ಇದ್ದರೂ ಸಹ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿ ಚರ್ಚಿಸಿದ್ದಾರೆ.
ಸಿದ್ದರಾಮಯ್ಯ ನಿವಾಸದ ಬೆಳವಣಿಗೆ : ಇನ್ನೊಂದೆಡೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸವು ಇಂದು ಒಂದಿಷ್ಟು ಚಟುವಟಿಕೆಯಿಂದ ಕೂಡಿತ್ತು. ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ ಅವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ರಿಯ ವಿವಾಹ ಸಮಾರಂಭಕ್ಕೆ ಆಹ್ವಾನ ನೀಡಿದರು.
ಇದೇ ಸಂದರ್ಭ ಸಿದ್ದರಾಮಯ್ಯ ನಿವಾಸಕ್ಕೆ ಮಧುಬಂಗಾರಪ್ಪ ಕೂಡ ಆಗಮಿಸಿದ್ದರು ಎಂಬ ಮಾಹಿತಿ ಇದೆ. ಸಿದ್ದರಾಮಯ್ಯ ಜೊತೆ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ಪತ್ಯೇಕ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.