ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯ ಕಾಂಗ್ರೆಸ್ ಪಕ್ಷ ಗಾಂಪರ ಗುರು ಎಂದು ಲೇವಡಿ ಮಾಡಿದೆ. ಪೆಟ್ರೋಲ್ ದರ ಏರಿಕೆಯನ್ನು ಸರಣಿ ಟ್ವೀಟ್ ಮೂಲಕ ಕೈ ಪಕ್ಷ ಖಂಡಿಸಿದೆ.
ಜನತೆಯ ಬೆವರಿನ ತೆರಿಗೆ ಹಣವನ್ನು ಪ್ರಚಾರಕ್ಕೆ ಪೋಲು ಮಾಡಿದ್ದಲ್ಲದೆ ಈಗ ವಿಫಲ ಆಡಳಿತದಿಂದ ಕುಸಿದು ಹೋದ ತನ್ನ ವರ್ಚಸ್ಸು ಬೆಳೆಸಿಕೊಳ್ಳಲು ನಾನಾ ಕಸರತ್ತುಗಳೊಂದಿಗೆ ವಿದ್ಯಾರ್ಥಿಗಳನ್ನೂ ಶೋಷಿಸಿ, ಬಳಸಿಕೊಳ್ಳುವ ಅತೀ ಕನಿಷ್ಠ ಮಟ್ಟಕ್ಕೆ ಇಳಿದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ದೇಶ ಮುನ್ನಡೆಯಲು ಸಮರ್ಪಕ ಆಡಳಿತ ಬೇಕೇ ಹೊರತು ಇಂತಹ ಗಿಮಿಕ್‌ಗಳಲ್ಲ ಎಂದಿದೆ.
ನರೇಂದ್ರ ಮೋದಿ ಅವರು ಕಾರ್ಪೊರೇಟ್ ಸೇವಕನಾಗಿ ತನ್ನ ಉದ್ಯಮಿ ಗೆಳೆಯರಿಗಾಗಿ ಇಂಧನ ತೈಲಗಳ ದರ ಏರಿಕೆ ಮೂಲಕ ಜನರ ಸುಲಿಗೆ ನಡೆಸಿದ್ದಾರೆ. ಈ ಸುಲಿಗೆಯನ್ನು ಸಮರ್ಥಿಸಿಕೊಳ್ಳಲು ಗಾಂಪರ ಗುಂಪು ಎನಿಸಿರುವ ರಾಜ್ಯ ಬಿಜೆಪಿ ತಮ್ಮ ವೈಫಲ್ಯಕ್ಕೆ ನೆಹರೂ ಹಾಗೂ ಕಾಂಗ್ರೆಸ್ ಅನ್ನು ದೂಷಿಸುವುದನ್ನು 'ಚಟ'ವನ್ನಾಗಿಸಿಕೊಂಡಿದೆ ಎಂದು ಕೈ ಪಕ್ಷ ಟ್ವೀಟ್ ಸಮರ ಮಾಡಿದೆ.
'ಮೋದಿ ಒಪ್ಪಿಗೆ ಮುದ್ರೆ': ಹಿಂದಿನ ಅಬಕಾರಿ ಸಚಿವರು ಅಧಿಕಾರಿಗಳಿಗೆ ಹಣಕ್ಕೆ ಪೀಡಿಸುವುದನ್ನು ಇಂದಿನ ಸಚಿವರೂ ಮುಂದುವರೆಸಿ ರಾಜ್ಯ ಬಿಜೆಪಿ ಭ್ರಷ್ಟಾಚಾರದ ಪರಂಪರೆಗೆ ತಮ್ಮ ಕೊಡುಗೆ ನೀಡಿದ್ದಾರೆ. ಅಬಕಾರಿ ಲಂಚಾವತಾರದ ಬಗ್ಗೆ ಹಿಂದೆಯೇ ಪತ್ರ ತಲುಪಿದ್ದರೂ ಸುಬಗನಂತೆ ಮಾತನಾಡುವ, ಪ್ರಧಾನಿಯ ಮೌನ ಬಿಜೆಪಿ ಭ್ರಷ್ಟಾಚಾರಕ್ಕೆ 'ಮೋದಿ ಒಪ್ಪಿಗೆ ಮುದ್ರೆ' ಒತ್ತಿದಂತೆ ಎಂದು ಹೇಳಿದೆ.
ಇದನ್ನೂ ಓದಿ: ವರ್ಷಾಂತ್ಯದೊಳಗೆ ಎಲ್ಲರಿಗೂ ವ್ಯಾಕ್ಸಿನ್; ಸಿಎಂ ಯಡಿಯೂರಪ್ಪ
ಸಚಿವರ ಭ್ರಷ್ಟಾಚಾರಕ್ಕೆ ಅಧಿಕಾರಿಗಳ ತಲೆದಂಡವೇಕೆ? ಆರೋಪವಿರುವುದು ಸಚಿವರ ವಿರುದ್ಧ, ಸಚಿವರನ್ನು ತನಿಖೆಗೆ ಒಳಪಡಿಸುವುದನ್ನು ಬಿಟ್ಟು ಅಧಿಕಾರಿಗಳನ್ನು ಅಮಾನತುಗೊಳಿಸಿ ಪ್ರಕರಣ ಮುಚ್ಚಿಹಾಕಿ ಸಚಿವರನ್ನು ಬಚಾವು ಮಾಡುವ ಈ ತಂತ್ರ ಸಾಕು. ಬಿ.ಎಸ್.ಯಡಿಯೂರಪ್ಪ ಅವರೇ, ಕೂಡಲೇ ಈ ಪ್ರಕರಣವನ್ನು ಉನ್ನತ ತನಿಖೆಗೆ ವಹಿಸಿ, ಸತ್ಯಾಸತ್ಯತೆ ಹೊರಬರಲಿ ಎಂದಿದೆ.
ಬಿಜೆಪಿ vs ಬಿಜೆಪಿ: ಬಿಜೆಪಿ ವರ್ಸಸ್ ಬಿಜೆಪಿ ಒಳಜಗಳದಲ್ಲಿ ಸರ್ಕಾರದ ದುರಾಡಳಿತ, ವೈಫಲ್ಯ, ಭ್ರಷ್ಟಾಚಾರ, ಕುಟುಂಬ ಹಸ್ತಕ್ಷೇಪವನ್ನು ಸ್ವತಃ ಬಿಜೆಪಿಗರೇ ಬಯಲು ಮಾಡುತ್ತಿದ್ದಾರೆ. ಆಡಳಿತ ಪಕ್ಷಕ್ಕಿರುವ ಗುರುತರ ಹೊಣೆಗಾರಿಕೆಯನ್ನು ಮರೆತು ಬೀದಿ ಜಗಳವನ್ನು ದಿನನಿತ್ಯದ ಕಾಯಕ ಮಾಡಿಕೊಂಡಿರುವ ರಾಜ್ಯ ಬಿಜೆಪಿ ಅನ್ಯ ಪಕ್ಷಗಳ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಟೀಕಿಸಿದೆ.