ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ 17 ಶಾಸಕರ ಅನರ್ಹತೆಯಿಂದ ತೆರವಾಗಿರುವ ಎಲ್ಲಾ ಕ್ಷೇತ್ರಗಳನ್ನೂ ಗೆಲ್ಲಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಅಗತ್ಯ ಬಿದ್ದರೆ ಬಿಜೆಪಿ ಹಾಗೂ ಜೆಡಿಎಸ್ನಿಂದ ಪ್ರಭಾವಿ ನಾಯಕರನ್ನು ಸೆಳೆಯಲು ಮುಂದಾಗಿದೆ ಎನ್ನಲಾಗಿದೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಬೆಳಗ್ಗಿಯಿಂದ ಸಂಜೆಯವರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಮೊದಲ ಹಂತದಲ್ಲಿ 11 ವಿಧಾನಸಭೆ ಕ್ಷೇತ್ರಗಳ ಮುಖಂಡರ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ ಚಿಕ್ಕಬಳ್ಳಾಪುರ, ಕೆಆರ್ ಪೇಟೆ, ಹುಣಸೂರು, ಮಸ್ಕಿ, ಯಲ್ಲಾಪುರ, ಗೋಕಾಕ್, ಅಥಣಿ, ಕಾಗವಾಡ, ಹಿರೇಕೆರೂರು, ರಾಣೇಬೆನ್ನೂರು ಹಾಗೂ ಬಳ್ಳಾರಿಯ ವಿಜಯನಗರ ವಿಧಾನಸಭಾ ಕ್ಷೇತ್ರಗಳ ಮುಖಂಡರ ಜೊತೆ ಸಭೆ ನಡೆಯಲಿದೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಶಿವಶಂಕರ ರೆಡ್ಡಿ, ಚಿಕ್ಕಬಳ್ಳಾಪುರ ಸುಧಾಕರ್ ರಾಜೀನಾಮೆಯಿಂದ ತೆರವಾಗಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಸಲಹೆ ನೀಡಿದ್ದಾರೆ. ಪಕ್ಷ ಸಂಘಟನೆಯ ಬಗ್ಗೆಯೂ ಸಲಹೆ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಸೂಚಿಸಿದ್ದಾರೆ. ಗೆಲ್ಲುವಂತಹ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದರು.
ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪರ್ಯಾಯ ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗುತ್ತಿದೆ ಎಂದರು.
ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ವಿಚಾರಣೆ ಶೀಘ್ರವೇ ಬರಲಿದ್ದು, ಆದಷ್ಟು ಬೇಗ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಎಲ್ಲ ರೀತಿಯ ಸಿದ್ಧತೆ ಆರಂಭಿಸಿವೆ ಎನ್ನಲಾಗಿದೆ.