ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಟ್ಯಾನರಿ ರೋಡ್ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬೆಲೆ ಏರಿಕೆಯಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಕಾಂಗ್ರೆಸ್ ಮಹಿಳಾ ಸಂಘಟನೆ ಕಾರ್ಯಕರ್ತರು ಸೌದೆ ಬಳಸಿ ಅಡುಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ದಲಿತ ಸಂಘರ್ಷ ಸಮಿತಿ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ತಮಟೆ ಬಾರಿಸಿ, ಮಹಿಳೆಯರು ಡ್ಯಾನ್ಸ್ ಮಾಡಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಕಾಂಗ್ರೆಸ್ ಪಕ್ಷ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಾ ಬಂದಿದೆ. ನಮಗೆ ಪೊಲೀಸ್ ಇಲಾಖೆಯಿಂದ ರ್ಯಾಲಿಗೆ ಅನುಮತಿ ಸಿಕ್ಕಿಲ್ಲ. ಅಂಬೇಡ್ಕರ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಅಂಬೇಡ್ಕರ್ ಪುತ್ಥಳಿಗೆ ಹಾರ ಹಾಕುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ಯಾಸ್, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಹಿಂಪಡೆಯಬೇಕು. ಅಲ್ಲದೇ ರೈತ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯಬೇಕು. ಅವರ ಮೇಲಾಗುತ್ತಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ಜನ ಸಾಮಾನ್ಯರು ಈಗಾಗಲೇ ಕೋವಿಡ್ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಮೇಲೆ ಬೆಲೆ ಏರಿಕೆ ಮಾಡಿ ಬರೆ ಎಳೆಯಲಾಗುತ್ತಿದೆ. ಕೂಡಲೇ ಎಲ್ಲಾ ಬೆಲೆ ಏರಿಕೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಟಿವಿ ಹಾಗೂ ಫ್ರಿಡ್ಜ್ ಇರುವ ಮನೆಯರಿಗೆ ಬಿಪಿಎಲ್ ಕಾರ್ಡ್ ಹಿಂಪಡೆಯುವ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಕ್ಷೇತ್ರದಲ್ಲಿ ತೊಂಭತ್ತರಷ್ಟು ಜನ ಬಡವರೇ ಇದ್ದಾರೆ. ಅಂಥವರು ಆಸ್ಪತ್ರೆಗೆ ಚಿಕಿತ್ಸೆ ಹೋಗಬೇಕೆಂದರೆ ಅವರಿಗೆ ಬಿಪಿಎಲ್ ಕಾರ್ಡ್ ಕಡ್ಡಾಯ. ಸಿದ್ಧರಾಮಯ್ಯ ಕೊಟ್ಟಿರುವ ಅನ್ನಭಾಗ್ಯಕ್ಕೆ ಇವರು ಕಡಿವಾಣ ಹಾಕಲು ಆಗುವುದಿಲ್ಲ. ಈ ವಿಚಾರದಲ್ಲಿ ಬಿಜೆಪಿ ಮನಸ್ಥಿತಿ ತಿಳಿಯುತ್ತದೆ. ಈ ರೀತಿಯ ಹೇಳಿಕೆ ನೀಡಿದರೆ ಪ್ರತಿಭಟನೆ ನಡೆಸಲಾಗುತ್ತದೆ. ಕೂಡಲೇ ಇಂತಹ ವಿಚಾರಗಳನ್ನು ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಒಬ್ಬ ಎಸಿಪಿ, ಇಬ್ಬರು ಇನ್ಸ್ಪೆೆಕ್ಟರ್, ಐದು ಜನ ಸಬ್ ಇನ್ಸ್ಪೆಕ್ಟರ್, 70 ಪೊಲೀಸ್ ಕಾನ್ಸ್ಟೇಬಲ್ ಹಾಗೂ 10 ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ನಿಯೋಜನೆಗೊಂಡಿದ್ದರು.