ಬೆಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಅಮಾನವೀಯ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವವರೆಗೂ ಕಾಂಗ್ರೆಸ್ ಕಾರ್ಯಕರ್ತರು ವಿಶ್ರಾಂತಿ ಪಡೆಯಬಾರದು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕರೆ ಕೊಟ್ಟಿದ್ದಾರೆ.
ಉತ್ತರಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಶಾಂತಿಯುತಪ್ರತಿಭಟನೆ ಜನಧ್ವನಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುಪಿ ಸಿಎಂ ಆಗಿ ಮುಂದುವರಿಯಲು ಯೋಗಿ ಆದಿತ್ಯನಾಥ್ ನಾಲಾಯಕ್. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಿಂಚಿತ್ ಆದರೂ ಮಹಿಳೆಯರ ಬಗ್ಗೆ ಗೌರವ ಇದ್ದರೆ ಕೂಡಲೇ ಮುಖ್ಯಮಂತ್ರಿ ಸ್ಥಾನದಿಂದ ಯೋಗಿ ಆದಿತ್ಯನಾಥ್ ಅವರನ್ನು ಕಿತ್ತು ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಿ ಶೋಭಾ ಕರಂದ್ಲಾಜೆ ಈಗ ಎಲ್ಲಿ ಹೋಗಿದ್ದಾರೆ. ಢೋಂಗಿ ನಾಲಾಯಕ್ ಸರ್ಕಾರ ರಾಜ್ಯ, ಕೇಂದ್ರದಲ್ಲಿದೆ. ಇದನ್ನು ಕಿತ್ತು ಹಾಕುವವರೆಗೂ ದೇಶದಲ್ಲಿ ದುರ್ಬಲರು, ದಲಿತರು, ಹೆಣ್ಣುಮಕ್ಕಳಿಗೆ ಧೈರ್ಯವಾಗಿ ಬದುಕಲು ಸಾಧ್ಯವಿಲ್ಲ. ಮೋದಿ ಬಣ್ಣದ ಮಾತಿಗೆ ಬೆಲೆಕೊಟ್ಟು ಜನ ಮತ ಕೊಟ್ಟರು. ಇಂದು ಅವರು ಬಣ್ಣ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದ 55 ವರ್ಷ ಯಾವುದೇ ರೀತಿ ತನಿಖಾ ಸಂಸ್ಥೆಯನ್ನು ರಾಜಕೀಯ ವೈರಿಗಳ ವಿರುದ್ಧ ಬಳಸಿರಲಿಲ್ಲ. ಆದರೆ, ಇದೀಗ ಬಿಜೆಪಿ ತನಿಖಾ ಸಂಸ್ಥೆಗಳನ್ನು ತಮ್ಮ ಕೈಯಲ್ಲಿ ಇರಿಸಿಕೊಂಡು ಅದನ್ನೇ ಅಸ್ತ್ರವಾಗಿ ಉಪಯೋಗಿಸುತ್ತಿದೆ ಎಂದು ಕಿಡಿಕಾರಿದರು.
ರಾಷ್ಟ್ರದ ಪ್ರಧಾನಿ ಆಗಬೇಕಾಗಿರುವ ರಾಹುಲ್ ಗಾಂಧಿ ಅವರ ಮೇಲೆ ಲಾಠಿ ಬೀಸಿರುವ ಯೋಗಿ ಸರ್ಕಾರದಿಂದ ಹಕ್ಕಿನ ರಕ್ಷಣೆ ಸಾಧ್ಯವೇ? ಕೊರೊನಾದಿಂದಾಗಿ ನಮ್ಮ ಜೈಲ್ ಬರೋ ಕಾರ್ಯಕ್ರಮಕ್ಕೆ ಹಿನ್ನಡೆ ಆಗಿದೆ. ನಿಮ್ಮ ಹಿಡನ್ ಅಜೆಂಡಾ ಜಾರಿಗೆ ತರಲು ಹೋದ್ರೆ ಜನ ತಕ್ಕ ಪಾಠ ಕಲಿಸುತ್ತಾರೆ.
ದೇಶದಲ್ಲಿ ಬೆಂಕಿ ಹೊತ್ತಿಕೊಳ್ಳಲಿದೆ. ಇಂದು ಡಿ ಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ಆಗಿದೆ. ಉಪ ಚುನಾವಣೆ ಸಂದರ್ಭದಲ್ಲಿ ದಾಳಿ ನಡೆಸುತ್ತಿರುವುದು ಎಷ್ಟು ಸರಿ?. ದಾಳಿ ನಡೆಸಿ, ತನಿಖೆ ಮಾಡಿದ್ರೆ ವಿರೋಧಿಸಲ್ಲ. ಆದರೆ, ಅದಕ್ಕೂ ಸಮಯ ಬೇಡವೇ? ಎಂದರು.
ಇದೇ ವೇಳೆ, ಕೆ. ಎಸ್. ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆ ಎಂದಿದ್ದೆ. ಇದಕ್ಕೆ ಅವರು ಬೇಜಾರು ಮಾಡಿಕೊಂಡಿದ್ದಾರೆ.
ನಾನು ಯಾರ ಹೆಸರನ್ನೂ ಹೇಳಿರಲಿಲ್ಲ. ಆದರೂ ಬೇಜಾರು ಮಾಡಿಕೊಂಡಿದ್ದಾರೆ. ನಾನು ಅವ್ಯವಹಾರ ನಡೆಸಿದವರ ಹೆಸರು ಹೇಳಲಾ? ಹೇಳಬೇಕಾ.. ಎಂದರು. ಕೊರೊನಾಗೆ ₹230 ಕೋಟಿ ಖರ್ಚಾಗಿದೆ ಎಂದಿದ್ದ ಸಚಿವರು, ಸದನದಲ್ಲಿ 4 ಸಾವಿರ ಕೋಟಿ ರೂ. ಖರ್ಚಾಗಿದೆ ಎಂದು ಉತ್ತರ ಕೊಟ್ಟಿದ್ದಾರೆ. ನಾವು ₹2 ಸಾವಿರ ಕೋಟಿ ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿದ್ದೆವು. ಅದಕ್ಕೆ ಸದನದಲ್ಲಿ ಮಾಹಿತಿ ಸಿಕ್ಕಿದೆ. ಹೆಣದ ಮೇಲೆ ಲಂಚ ಹೊಡೆಯುವ ಇಂಥ ಮಾನ ಗೆಟ್ಟವರನ್ನು, ಮಾನವೀಯತೆ ಉಳ್ಳವರು ಎನ್ನಲು ಸಾಧ್ಯವೇ? ಎಂದರು.
ಢೋಂಗಿ ಸರ್ಕಾರ : ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಉತ್ತರಪ್ರದೇಶದಲ್ಲಿ ಯೋಗಿ ಸರ್ಕಾರ ಇಲ್ಲ, ಢೋಂಗಿ ಸರ್ಕಾರ ಅಧಿಕಾರದಲ್ಲಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ.
ದೇಶದಲ್ಲಿ ಕೋಮು ಸೌಹಾರ್ದ ಹಾಳಾಗಿದೆ. ಕಾಂಗ್ರೆಸ್ ಇದರ ವಿರುದ್ಧ ಹೋರಾಡಬೇಕಿದೆ. ರಾಷ್ಟ್ರದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಮಹಿಳೆಯರ ರಕ್ಷಣೆಗೆ ನಿಲ್ಲಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರ ನಿವಾಸದ ಮೇಲೆ ಸಿಬಿಐ ದಾಳಿ ನಡೆದಿದೆ. ವಿಜಯೇಂದ್ರ ಮೇಲೆ ಭ್ರಷ್ಟಾಚಾರದ ವಿರುದ್ಧ ದೂರಿದ್ದೆವು. ಉಪ ಚುನಾವಣೆ ಸಂದರ್ಭ ನಮ್ಮನ್ನು ಹೆದರಿಸಲು ದಾಳಿ ನಡೆಸಲಾಗಿದೆ. ನಾವು ಇದಕ್ಕೆ ಹೆದರುವ ಅಗತ್ಯವಿಲ್ಲ ಎಂದರು.