ಬೆಂಗಳೂರು : ನಾಲ್ಕು ವರ್ಷಗಳಿಂದ ಜನಸೇವೆ ಮಾಡದೆ, ತಲೆಮರೆಸಿಕೊಂಡು ಈಗ ಹಿಂದೂ ಧಾರ್ಮಿಕತೆ ಹಾಗೂ ಶ್ರೀ ರಾಮನ ಹೆಸರಿನಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಕೀಳುಮಟ್ಟದ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಸಂಸದ, ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಅನಂತ್ ಕುಮಾರ್ ಪ್ರತಿಕೃತಿ ದಹಿಸಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಶಾಂತಿ ಪುರುಷ ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಯ ಕೆಲವರು ರಾಮನನ್ನು ರಾಜಕೀಯವಾಗಿ ಎಳೆದು ತರುತ್ತಿದ್ದಾರೆ. ಬಿಜೆಪಿಯವರು ಧಾರ್ಮಿಕ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ ಕೀಳುಮಟ್ಟದ ಅಭಿರುಚಿಯನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯದ ಕೋಟ್ಯಂತರ ಜನರ ಹಾಗೂ ಕನ್ನಡಿಗರ ಪ್ರತಿನಿಧಿಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳನ್ನು ಅವಹೇಳನಕಾರಿ ಪದಗಳಲ್ಲಿ ಟೀಕಿಸಿರುವ ಸಂಸದ ಅನಂತ್ ಕುಮಾರ್ ಹೆಗಡೆಯವರನ್ನು ಕೂಡಲೇ ಬಂಧಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕೂಡಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಎ. ಆನಂದ್, ಜಿ. ಜನಾರ್ಧನ್, ಪರಿಸರ ರಾಮಕೃಷ್ಣ, ಹೇಮರಾಜು ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯನವರಿಗೆ ಸಂಸ್ಕೃತಿ ಪದದ ನೆನಪಾದರೂ ಆಯಿತಲ್ಲ, ಧನ್ಯವಾದಗಳು: ಸಂಸದ ಹೆಗಡೆ