ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ 10 ರಿಂದ 20 ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ಗೆ ಸೆಳೆಯುವ ಮೂಲಕ ಅವರ ಪ್ರಭಾವದ ಜತೆ ಕಾಂಗ್ರೆಸ್ ಬಲವನ್ನೂ ಸೇರಿಸಿ ಒಂದಿಷ್ಟು ಹೆಚ್ಚುವರಿ ಸ್ಥಾನ ಗೆಲ್ಲಲು ಕಾಂಗ್ರೆಸ್ ಮುಂದಾಗಿದೆ ಎಂಬ ಮಾಹಿತಿ ಇದೆ.
ಈಗಾಗಲೇ 5ಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಜೆಡಿಎಸ್ ಶಾಸಕರಿಗೆ ಗಾಳ ಹಾಕಿ ಅವರನ್ನು ಸೆಳೆಯುವಲ್ಲಿ ಬಹುತೇಕ ಯಶಸ್ಸು ಕಂಡಿರುವ ಕಾಂಗ್ರೆಸ್ ಪಕ್ಷ, ಮುಂದುವರಿದು ಹಳೆ ಮೈಸೂರು ಹಾಗೂ ಬಯಲುಸೀಮೆ ಜಿಲ್ಲೆಗಳ ಕೆಲ ಶಾಸಕರ ಜತೆಗೂ ಯಶಸ್ವಿ ಮಾತುಕತೆ ನಡೆಸಿದೆ ಎಂಬ ಮಾಹಿತಿ ಲಭಿಸಿದೆ.
ತುಮಕೂರು ಜಿಲ್ಲೆಯ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ಮಧುಗಿರಿ ಶಾಸಕ ಎಂ.ವಿ. ವೀರಭದ್ರಯ್ಯ, ಕೊರಟಗೆರೆ ಮಾಜಿ ಶಾಸಕ ಸುಧಾಕರ್ ಲಾಲ್, ಚಿಕ್ಕನಾಯಕನಹಳ್ಳಿ ಸಿ.ಬಿ. ಸುರೇಶ್ಬಾಬು, ಪಾವಗಡದ ಕೆ.ಎಂ. ತಿಮ್ಮರಾಯಪ್ಪ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಶಾಸಕ ಎ.ಎಸ್. ರವೀಂದ್ರ ಶೀಕಂಠಯ್ಯ, ನಾಗಮಂಗಲ ಶಾಸಕ ಸುರೇಶ್ಬಾಬು ಅವರನ್ನು ಸೆಳೆಯುವ ನಿಟ್ಟಿನಲ್ಲಿ ಹಲವು ಹಂತದಲ್ಲಿ ಮಾತುಕತೆ ನಡೆಸುತ್ತಿದೆ. ಬಹುತೇಕ ಮಂದಿ ಇದುವರೆಗೂ ಯಾವುದೇ ಸ್ಪಷ್ಟತೆ ನೀಡಿಲ್ಲವಾದರೂ, ಯಾವುದೇ ಸಂದರ್ಭದಲ್ಲಿಯೂ ಪೂರಕವಾಗಿ ಸ್ಪಂದಿಸಬಹುದು ಎಂದು ಹೇಳಲಾಗುತ್ತಿದೆ.
ಜಿಟಿಡಿ ಹಿಂದೇಟು:
ಮಾಜಿ ಸಚಿವ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಬಹುತೇಕ ಜೆಡಿಎಸ್ನಿಂದ ಹೊರಬಿದ್ದಾಗಿದೆ. ಅಲ್ಲದೇ ಜೆಡಿಎಸ್ ನಾಯಕರು ಒಂದು ಹೆಜ್ಜೆ ಮುಂದೆ ಹೋಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಸರು ಸಹ ಘೋಷಿಸಿದ್ದಾರೆ. ಆದರೆ, ಇತ್ತೀಚೆನ ಕಾಂಗ್ರೆಸ್ ಬೆಳವಣಿಗೆ ಹಾಗೂ ಕ್ಷೇತ್ರದಲ್ಲಿ ತಾವು ಕಾಂಗ್ರೆಸ್ ಸೇರ್ಪಡೆಯಾದರೆ ಹಿಂದಿನ ವರ್ಚಸ್ಸು ಉಳಿಯುವುದಿಲ್ಲ ಎಂಬ ಮಾಹಿತಿ ಪಡೆದಿದ್ದಾರೆ ಎನ್ನಲಾಗ್ತಿದೆ.
ಅಲ್ಲದೇ, ತಮ್ಮ ಪುತ್ರನನ್ನು ಮೈಸೂರು-ಕೊಡಗು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸಿಕೊಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಆದರೆ, ಗೆಲುವು ಅಷ್ಟು ಸುಲಭವಲ್ಲ. ಅಲ್ಲದೇ ತಾವು ಕಾಂಗ್ರೆಸ್ ಅಭ್ಯರ್ಥಿಯಾಗಿ ಚಾಮುಂಡೇಶ್ವರಿಯಿಂದ ನಿಂತರೆ ಸೋಲುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕ ಜಿಟಿಡಿಗೆ ಶುರುವಾಗಿದೆ ಎಂಬ ಮಾತುಗಳು ಕೇಲಿಬರುತ್ತಿವೆ. ಇದರಿಂದಲೇ ಜೆಡಿಎಸ್ನಲ್ಲಿಯೇ ಉಳಿಯುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ ಎಂಬ ಮಾತನ್ನು ಜೆಡಿಎಸ್ ಮುಖಂಡರೊಬ್ಬರೇ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ತಮ್ಮ ಗೆಲುವಿಗೆ ಮುಂದೆ ಅಡ್ಡಗಾಲು ಆಗಬಹುದು ಎನ್ನುವ ಆತಂಕವೂ ಜಿ.ಟಿ. ದೇವೇಗೌಡರಿಗೆ ಇದೆ. ಇದರಿಂದ ಮುಂದಿನ ದಾರಿ ಅರಿಯದೇ ಗೊಂದಲದಲ್ಲಿದ್ದಾರೆ ಅಂತಲೂ ಹೇಳಲಾಗ್ತಿದೆ.
ಮುಂಬರುವ ದಿನಗಳಲ್ಲಿ ಸಾಕಷ್ಟು ಜೆಡಿಎಸ್ ನಾಯಕರನ್ನು ಸಂಪರ್ಕಿಸಿ ಅವರನ್ನು ಕಾಂಗ್ರೆಸ್ನತ್ತ ಸೆಳೆದುಕೊಳ್ಳುವುದಕ್ಕೆ ಪಕ್ಷದ ಹೈಕಮಾಂಡ್ ಸಹ ಸಮ್ಮತಿ ನೀಡಿದೆ. ಗೆಲ್ಲುವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಿ, ಹಿಂದೆ ನಮ್ಮ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಯ ಮನವೊಲಿಸುವ ಕಾರ್ಯವನ್ನೂ ಮಾಡಿ. ಒಗ್ಗಟ್ಟಾಗಿ ಶ್ರಮಿಸಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲಾ ನಾಯಕರಿಗೂ ಪಕ್ಷದ ಚಟುವಟಿಕೆಯಲ್ಲಿ ಪ್ರಮುಖ ಜವಾಬ್ದಾರಿ ನೀಡಿ ಗೌರವಿಸುವ ಕಾರ್ಯ ಮಾಡಿ ಎಂದು ಸೂಚಿಸಿದೆ. ಈ ನಿಟ್ಟಿನಲ್ಲಿ ಜೆಡಿಎಸ್ನಿಂದ ಕಾಂಗ್ರೆಸ್ನತ್ತ ಬರಲು ಬಯಸುವ ಹಾಗೂ ಹಿಂದೆ ಕಾಂಗ್ರೆಸ್ ಪಕ್ಷ ಬಿಟ್ಟು ಜೆಡಿಎಸ್ ಸೇರಿದ್ದ ನಾಯಕರ ಮನವೊಲಿಸುವ ಕಾರ್ಯ ಆರಂಭವಾಗಿದೆ.