ಬೆಂಗಳೂರು: ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆ ಮುಕ್ತಾಯವಾಗಿದೆ.
ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಚಲುವರಾಯಸ್ವಾಮಿ, ಕೆ.ಆರ್.ಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಇವತ್ತು ನಮ್ಮ ಜಿಲ್ಲಾ ಮುಖಂಡರ ಸಭೆ ನಡೆಸಿದ್ದಾರೆ. ನಮ್ಮ ಅಭಿಪ್ರಾಯಗಳನ್ನು ಮುಂದಿಟ್ಟಿದ್ದೇವೆ. ನಾಲ್ವರು ಅಭ್ಯರ್ಥಿ ಆಕಾಂಕ್ಷಿಗಳಾದ ಚಂದ್ರಶೇಖರ್, ಪ್ರಕಾಶ್, ಕಿಕ್ಕೇರಿ ಸುರೇಶ್, ಅಂಬರೀಶ್ ಎಂಬುವರ ಹೆಸರು ಚರ್ಚೆಯಾಗಿದೆ. ಅದಕ್ಕೂ ಮೊದಲು ಕಾರ್ಯಕರ್ತರ ಸಮಾವೇಶ ಮಾಡಲು ಸೂಚನೆ ನೀಡಲಾಗಿದೆ. ಈ ನಾಲ್ಕು ಹೆಸರು ಅಂತಿಮವಲ್ಲ, ಇನ್ನೊಂದು ಸುತ್ತು ಸಭೆ ನಡೆಯಲಿದೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ ಎಂದರು.
'ಕುಮಾರಸ್ವಾಮಿ ಸರ್ಕಾರ ಉಳಿಯಲು ಡಿಕೆಶಿ ಕೊಡುಗೆ ಅಪಾರ'
ಮಾಜಿ ಸಚಿವ ಡಿಕೆ ಶಿವಕುಮಾರ್ ಪರ ಒಕ್ಕಲಿಗ ಸಮುದಾಯದ ಹೋರಾಟಕ್ಕೆ ಹೆಚ್. ಡಿ. ಕುಮಾರಸ್ವಾಮಿ ಗೈರು ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರತಿಭಟನೆಗೆ ಆಹ್ವಾನ ನೀಡಲಾಗಿಲ್ಲ ಅಂತ ಅವರೇ ಹೇಳಿದ್ದಾರೆ. ನಮಗೂ ಆಹ್ವಾನ ಇರಲಿಲ್ಲ. ಸಮುದಾಯದ ಹೋರಾಟಕ್ಕೆ ನೈತಿಕ ಬೆಂಬಲ ಕೊಡುವ ದೃಷ್ಟಿಯಿಂದ ನಾವೆಲ್ಲಾ ಹೋಗಿದ್ವಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಉಳಿವಿಗೆ ಡಿ.ಕೆ ಶಿವಕುಮಾರ್ ಏನೆಲ್ಲಾ ಕಸರತ್ತು ನಡೆಸಿದ್ರು? ಎಷ್ಟು ಎಫರ್ಟ್ ಹಾಕಿದ್ರು? ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ ಎಂದರು.