ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾದ ಹಿನ್ನೆಲೆ ಗೆಲುವಿನ ಕಾರ್ಯತಂತ್ರ ರೂಪಿಸುವ ಕಾಂಗ್ರೆಸ್ ಹಿರಿಯ ನಾಯಕರ ಸಭೆ ಆರಂಭವಾಗಿದೆ.
ಬೆಂಗಳೂರಿನ ಕ್ವಿನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಆರಂಭವಾಗಿರುವ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು ಪಾಲ್ಗೊಂಡಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್‌ಆರ್ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಆರ್ ವಿ ದೇಶಪಾಂಡೆ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದಾರೆ.
ಉಪಚುನಾವಣೆ ಘೋಷಣೆ ಹಿನ್ನೆಲೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆಗೆ ಈಗಾಗಲೇ ಅಭ್ಯರ್ಥಿ ಹೆಸರು ಘೋಷಿಸಲಾಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಅಂತಿಮವಾಗಬೇಕಿದೆ. ಶೀಘ್ರವೇ ಘೋಷಣೆಯಾಗದಿರುವ ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಹೆಸರು ಪ್ರಕಟವಾಗಿದ್ದು, ಘೋಷಿತ ಮೂರು ಕ್ಷೇತ್ರಗಳ ಜೊತೆ ಘೋಷಣೆಯಾಗದಿರುವ ಒಂದು ಕ್ಷೇತ್ರದ ಉಪಚುನಾವಣೆ ಗೆಲ್ಲುವ ಕಾರ್ಯತಂತ್ರ ಹೆಣೆಯಲು ಮಹತ್ವದ ಸಭೆ ಕರೆಯಲಾಗಿದೆ.
ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ನಿರಂತರವಾಗಿ ಟೀಕಿಸುತ್ತ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಉಪಚುನಾವಣೆ ಅತ್ಯಂತ ಪ್ರತಿಷ್ಠೆಯ ಸಂಕೇತವಾಗಿದೆ. ಕೆಪಿಸಿಸಿ ಅಧ್ಯಕ್ಷರ ಪಾಲಿಗೆ ತಾವು ಅಧಿಕಾರ ವಹಿಸಿಕೊಂಡ ನಂತರ ಒಂದು ಕೂಡ ಸಿಕ್ಕಿಲ್ಲ. ಈ ಉಪಚುನಾವಣೆಯಲ್ಲಿ ಸಾಂಘಿಕ ಹೋರಾಟದ ಮೂಲಕ ಗೆಲುವು ಸಾಧಿಸುವ ಮಹದಾಸೆ ಹೊಂದಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೆಲೆ ಏರಿಕೆ ಹಾಗೂ ಎಪಿಎಂಸಿ ಮತ್ತು ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜನ ವಿರೋಧಿಯಾಗಿದೆ ಎಂದು ಬಿಂಬಿಸುವ ಮೂಲಕ ಜನರ ಬಳಿ ತೆರಳಿ ಸರ್ಕಾರದ ವಿರುದ್ಧ ಜನರ ಮಧ್ಯೆ ತೆರಳುವ ಪ್ರಯತ್ನ ಕಾಂಗ್ರೆಸ್ ಮಾಡಲಿದೆ. ಈ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ಹಲವು ಕೋನಗಳಲ್ಲಿ ಚರ್ಚೆ ನಡೆಯಲಿದೆ.
ಶತಾಯಗತಾಯ ಉಪ ಚುನಾವಣೆ ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ರಾಜ್ಯದಲ್ಲಿ ಉಳಿದುಕೊಂಡಿದೆ ಎಂಬುದನ್ನು ಸಹ ತೋರಿಸಬೇಕಾಗಿದೆ. ಏಪ್ರಿಲ್ 17ರಂದು ನಡೆಯುವ 2 ವಿಧಾನಸಭೆ ಹಾಗೂ ಒಂದು ಲೋಕಸಭೆ ಕ್ಷೇತ್ರಗಳ ಉಪಚುನಾವಣೆ ಗೆಲುವಿಗೆ ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ಇಂದಿನ ಸಭೆಯಲ್ಲಿ ವಿಶೇಷ ಗಮನ ಹರಿಸಲಾಗುತ್ತಿದೆ.