ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇಂದು ಸಂಜೆ ನಡೆಯಲಿದ್ದು, ಮೈತ್ರಿ ಸರ್ಕಾರದ ಜತೆ ತಮ್ಮ ಶಾಸಕರನ್ನು ಕೂಡ ಆಪರೇಷನ್ಗೆ ಒಳಗಾಗದಂತೆ ಉಳಿಸಿಕೊಳ್ಳುವ ಯತ್ನಕ್ಕೆ ಸಂಬಂಧಿಸಿದ ಮಾತುಕತೆ ನಡೆಯಲಿದೆ.
ಸಂಜೆ 5.30 ಕ್ಕೆ ಹೋಟೆಲ್ ತಾಜ್ ವಿವಾಂತದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಡಿಸಿಎಂ ಜಿ.ಪರಮೇಶ್ವರ್ ಉಪಸ್ಥಿತರಿರುತ್ತಾರೆ. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯ ಸಭೆಯ ಸದಸ್ಯರುಗಳು ಸಹ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ತಿಳಿಸಲಾಗಿದೆ.
![bangalore](https://etvbharatimages.akamaized.net/etvbharat/prod-images/kn-bng-02-congress-clp-meeting-script-9020923_21072019114151_2107f_1563689511_118.jpeg)
ರೆಸಾರ್ಟ್ ವಾಸ್ತವ್ಯ ವಿಚಾರವಾಗಿ ಬೇಸರಗೊಂಡಿರುವ ಕೆಲ ಶಾಸಕರು ನಾಯಕರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಟ್ಟು ಹೋಗುವವರನ್ನ ತಡೆಯಲು ಸಾಧ್ಯವಿಲ್ಲ. ಸೋಮವಾರ ವಿಶ್ವಾಸಮತಯಾಚನೆ ಮಾಡಬೇಕು. ಆಗಲೂ ಸರ್ಕಾರ ಉಳಿಯುವುದು ಡೌಟು. ಅನಾವಶ್ಯಕವಾಗಿ ರೆಸಾರ್ಟ್ ನಲ್ಲಿ ಕೂಡಿಹಾಕುವುದು ಬೇಡ. ಹೋಗುವವರು ಯಾವಾಗಿದ್ದರೂ ಹೋಗುತ್ತಾರೆ. ಹೋಗುವವರನ್ನ ತಡೆಯಲು ಸಾಧ್ಯವಿದೆಯೇ? ಎಂದು ಪ್ರಶ್ನಿಸುತ್ತಿದ್ದಾರೆ ಎನ್ನಲಾಗ್ತಿದೆ.
11 ದಿನಗಳಿಂದ ನಾವು ಹೋಟೆಲ್ ಹಾಗೂ ರೆಸಾರ್ಟ್ ನಲ್ಲಿಯೇ ಇದ್ದೇವೆ. ಮನೆ, ಮಠ, ಕ್ಷೇತ್ರ ಬಿಟ್ಟು ಇಲ್ಲಿದ್ದರೆ ಜನ ಏನಂದಾರು? ಊರಿಗೆ ತೆರಳಲು ಅವಕಾಶ ಮಾಡಿಕೊಡಿ. ನಾವ್ಯಾರು ಪಕ್ಷ ಬಿಟ್ಟು ಓಡಿಹೋಗುವವರಲ್ಲ ಎಂದು ತಮ್ಮ ಭೇಟಿಗೆ ಬರುತ್ತಿರುವ ರಾಜ್ಯ ನಾಯಕರ ಬಳಿ ಕೆಲವು ಶಾಸಕರು ಅಳಲು ತೋಡಿಕೊಂಡಿದ್ದಾರಂತೆ.
ಅವಶ್ಯಕತೆ ಇರುವವರು ಹೋಗಿ ಬನ್ನಿ ಎಂದು ನಾಯಕರು ತಿಳಿಸಿದ್ದು, ಇದರಿಂದ ಕೆಲವರು ತೆರಳಿದ್ದಾರೆ. ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆಗೆ ಎಲ್ಲರೂ ಆಗಮಿಸಲಿದ್ದಾರೆ. ಸದ್ಯ ಹೋಟೆಲ್ನಲ್ಲಿ 25 ಶಾಸಕರಿದ್ದಾರೆ ಎಂಬ ಮಾಹಿತಿ ಇದ್ದು, ಸಂಜೆ ವೇಳೆಗೆ ಉಳಿದವರು ಬಂದು ಸೇರಿಕೊಳ್ಳಲಿದ್ದಾರೆ.