ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾಮೀನಿನ ಮೇಲೆ ಹೊರ ಬಂದು ಬೆಂಗಳೂರು ಸೇರಿದ್ದಾರೆ. ಶನಿವಾರದಿಂದ ಡಿಕೆಶಿ ಮನೆಗೆ ಹಲವಾರು ನಾಯಕರು ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿ ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಇಂದು ಕೂಡ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಹಲವರು ಭೇಟಿ ನೀಡಿದ್ದಾರೆ. ಸದಾಶಿವನಗರದಲ್ಲಿರುವ ಅವರ ಮನೆಗೆ ಭೇಟಿ ನೀಡಿದ ಅವರ ಹಿತೈಷಿಗಳು ಅವರೊಂದಿಗೆ ಮಾತುಕತೆ ನಡೆಸಿದರು.
ಮಾಜಿ ಸಚಿವ ಪರಮೇಶ್ವರ್ ನಾಯ್ಕ್, ಶಾಸಕ ರಾಘವೇಂದ್ರ ಹಿಟ್ನಾಳ್, ಶಾಸಕ ಹ್ಯಾರೀಸ್, ಮುಖಂಡರಾದ ವಾಸಂತಿ ಶಿವಣ್ಣ, ಸುಮಾ ವಸಂತ್, ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಡಿಕೆಶಿಯನ್ನು ಭೇಟಿ ಮಾಡಿದರು. ಇದರ ಜೊತೆಗೆ ಮಾಜಿ ಸಂಸದ ಬಿ.ವಿ.ನಾಯಕ್, ವಿಧಾನ ಪರಿಷತ್ ಸದಸ್ಯ ಭೋಸರಾಜು, ಶಾಸಕರಾದ ಡಿ.ಎಸ್.ಹೂಲಗೇರಿ, ಬಸನಗೌಡ ದದ್ದಲ್ ಕೂಡ ಡಿಕೆಶಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಎರಡು ದಿನಗಳಿಂದ ಡಿ.ಕೆ.ಶಿವಕುಮಾರ್ ತಮ್ಮ ನಿವಾಸದಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದು, ಅವರನ್ನು ಹಲವು ನಾಯಕರು ಈಗಾಗಲೇ ಭೇಟಿ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಡಿಕೆಶಿಗೆ ಧೈರ್ಯ ತುಂಬಿದ್ದಾರೆ.