ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಮತ್ತು ಸಿಎಂ ತಮ್ಮ ನಾಯಕರನ್ನು ಹದ್ದುಬಸ್ತಿನಲ್ಲಿ ಇಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ತಮ್ಮ ವರಿಷ್ಠರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ಧಾರವಾಡದ ಕುಂದಗೋಳದಲ್ಲಿ ಇದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಬಳಿ ಕಾಂಗ್ರೆಸ್ನ ಕೆಲ ಮುಖಂಡರು ಈ ಬೇಸರವನ್ನು ತೋಡಿಕೊಂಡಿದ್ದು, ಇದೇ ಸ್ಥಿತಿ ಮುಂದುವರಿದರೆ ಸಾಕಷ್ಟು ಸಮಸ್ಯೆಗಳು ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಲಿವೆ ಎಂದು ವಿವರಿಸಿದ್ದಾರೆ.
ಪ್ರತಿನಿತ್ಯ ಜೆಡಿಎಸ್ ಪ್ರಮುಖರು ತಾವೇ ಕಾಲು ಕೆರೆದುಕೊಂಡು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿದ್ದಾರೆ. ಈ ಹಿಂದೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಈ ಸರ್ಕಾರದಲ್ಲಿ ಅವರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇವರ ಸಲಹೆ ಸೂಚನೆಗಳನ್ನು ಪರಿಗಣಿಸುತ್ತಿಲ್ಲ. ಉತ್ತಮ ನಾಯಕತ್ವ ಗುಣ ಹೊಂದಿರುವ ಸಿದ್ದರಾಮಯ್ಯರನ್ನು ಕಡೆಗಣಿಸುವ ಜೊತೆಗೆ ಅವಹೇಳನಕಾರಿ ಮಾತುಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ದೇವೇಗೌಡರ ಮೌನ:
ಇಷ್ಟೆಲ್ಲಾ ಆದರೂ ಕೂಡ ಜೆಡಿಎಸ್ ವರಿಷ್ಟ ಎಚ್ ಡಿ ದೇವೇಗೌಡ ಯಾರ ಹೇಳಿಕೆಗಳನ್ನೂ ನಿಯಂತ್ರಿಸುತ್ತಿಲ್ಲ. ಕೇವಲ ನಾವು ಮಾತ್ರ ನಮ್ಮ ಶಾಸಕರಿಗೆ ಎಚ್ಚರಿಕೆ ಕೊಡುತ್ತಿದ್ದೇವೆ. ಸಮನ್ವಯ ಸಮಿತಿಯಲ್ಲಿ ಇದರ ಬಗ್ಗೆ ಗಂಭೀರ ಚರ್ಚೆ ಆಗಲೇಬೇಕು ಎಂದು ಉಸ್ತುವಾರಿ ಕೆಸಿ ವೇಣುಗೋಪಾಲ್ ಮುಂದೆ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನು ಸರಿಪಡಿಸಲೇಬೇಕು ಅಂತ ರಾಜ್ಯ ಕಾಂಗ್ರೆಸ್ ನಾಯಕರು ಒತ್ತಾಯ ಮಾಡಿದ್ದಾರೆ.
ಇದಕ್ಕೆ ಸಮಾಧಾನದಿಂದಲೇ ವೇಣುಗೋಪಾಲ್ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಜೊತೆ ಈ ಬಗ್ಗೆ ಚರ್ಚಿಸುವ ಭರವಸೆ ನೀಡಿದ್ದಾರೆ.