ಬೆಂಗಳೂರು : ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಹೋರಾಟವೇ ನಮ್ಮ ಉದ್ದೇಶ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೋರಾಟ ಮಾಡುವುದೇ ನಮ್ಮ ಉದ್ದೇಶ. ಬಿಜೆಪಿ ಸಚಿವರು ರಾಷ್ಟ್ರ ಧ್ವಜಕ್ಕೆ ಅಪಮಾನಿಸಿದ್ದಾರೆ. ಈ ರಾಷ್ಟ್ರಧ್ವಜ ನಮ್ಮ ಅಭಿಮಾನದ ಸಂಕೇತ.
ಲಕ್ಷಾಂತರ ಜನ ಈ ಧ್ವಜಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಈಶ್ವರಪ್ಪಗೆ ತರಾಟೆ ತೆಗೆದುಕೊಂಡಿದ್ದಾರೆ. ಕೇವಲ ಈಶ್ವರಪ್ಪನವರನ್ನ ಬೈದರೆ ಸಾಕೇ? ಅವರನ್ನ ವಜಾ ಮಾಡೋಕೆ ನಿಮಗೆ ಮನಸ್ಸಿಲ್ವಾ? ಅವರನ್ನ ವಜಾ ಮಾಡೋದಿಲ್ಲವೆಂಬುದೇ ನಿಮ್ಮ ಸಿದ್ಧಾಂತವೇ? ಇಂದಿನಿಂದ ಬಿಜೆಪಿಯವರಿಗೆ ದೇಶಭಕ್ತಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ನಾವು ಒಂದು ವಾರ ಧರಣಿ ಮಾಡಿದ್ದೇವೆ. ಬಿಜೆಪಿಯವರು ದೇಶಪ್ರೇಮಿಗಳು ಅಂತಾರಲ್ಲ, ಯಾಕೆ ಅವರನ್ನ ವಜಾ ಮಾಡಲಿಲ್ಲ? ಬೇರೆಯವರು ಮಾಡಿದ್ದರೆ ನೀವು ಬಿಡ್ತಿದ್ರಾ?ಅವರ ಮೇಲೆ ದೇಶದ್ರೋಹ ಕೇಸ್ ಹಾಕ್ತಿರಲಿಲ್ವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಕಾಡು ಪ್ರಾಣಿಗಳಿಗೆ ಸಿಂಹ ಕಂಡರೆ ಭಯ.. ತಾವು ಸಿಂಹ ಎಂದು ಸ್ವಯಂ ಘೋಷಿಸಿಕೊಂಡ ಸಚಿವ ಈಶ್ವರಪ್ಪ..
ವಿಧಾನಸಭೆ ಕಾಂಗ್ರೆಸ್ ಉಪನಾಯಕ ಯು.ಟಿ ಖಾದರ್ ಮಾತನಾಡಿ, ನಾವು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಹೋರಾಟ ಮಾಡಿದ್ದೇವೆ. ಆದರೆ, ಬಿಜೆಪಿ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಈಶ್ವರಪ್ಪ ಹೇಳಿಕೆ ಬಗ್ಗೆ ಮೌನ ಮುರಿದಿದ್ದಾರೆ. ಆರಂಭದಲ್ಲಿ ಕ್ಷಮೆ ಕೇಳಬಹುದು ಅಂತಾ ಅಂದುಕೊಂಡಿದ್ದೆವು.
ಅವರು ಕ್ಷಮೆಯನ್ನ ಕೇಳಲೇ ಇಲ್ಲ. ಬಿಜೆಪಿಯವರ ಬೇಜವಾಬ್ದಾರಿ ನಡೆ ಕಾರಣ ಕಲಾಪ ಸುಗಮವಾಗಿ ನಡೆಯಲಿಲ್ಲ. ಸದನದ ಹೊರಗೂ ನಾವು ಹೋರಾಟ ಮಾಡುತ್ತೇವೆ. ಸಂಜೆ ರಾಜ್ಯಪಾಲರನ್ನ ಭೇಟಿ ಮಾಡುತ್ತೇವೆ. ವಜಾಗೊಳಿಸುವಂತೆ ಸರ್ಕಾರಕ್ಕೆ ಕಿವಿಮಾತು ಹೇಳಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡುತ್ತೇವೆ ಎಂದರು.