ಬೆಂಗಳೂರು: ರಂಜಾನ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಗಾಗಿ ಪತ್ರ ಬರೆದ ಸಿ.ಎಂ.ಇಬ್ರಾಹಿಂ ನಡೆ ಬಗ್ಗೆ ಕೈ ನಾಯಕರೇ ಅಸಮಾಧಾನಗೊಂಡಿದ್ದಾರೆ.
ರಂಜಾನ್ ಹಬ್ಬದ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಡಿ ಅಂತ ಸಿ.ಎಂ.ಇಬ್ರಾಹಿಂ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದರು. ಈ ಪತ್ರದ ಬಗ್ಗೆ ಬಿಜೆಪಿ ನಾಯಕರು ಹಾಗೂ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಇತ್ತ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಪತ್ರಕ್ಕೆ ಕಾಂಗ್ರೆಸ್ನಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಪಕ್ಷದ ಗಮನಕ್ಕೆ ತರದೇ ಸಿಎಂಗೆ ಪತ್ರ ಬರೆದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕೊರೊನಾ ಸಂದರ್ಭದಲ್ಲಿ ಈ ರೀತಿ ಪತ್ರ ಬರೆದರೆ ಪಕ್ಷಕ್ಕೆ ಮಾರಕ ಆಗಲ್ವೇ ಎಂದು ಪ್ರಶ್ನಿಸಿದ್ದಾರೆ.
ಮೊದಲೇ ತಬ್ಲಿಘಿಗಳಿಂದ ಕೊರೊನಾ ಜಾಸ್ತಿ ಆಯಿತು ಎಂಬ ಮನೋಭಾವನೆ ಹುಟ್ಟಿದೆ. ಈ ಸಂದರ್ಭದಲ್ಲಿ ಸಿ.ಎಂ.ಇಬ್ರಾಹಿಂ ಸಾಮೂಹಿಕ ಪ್ರಾರ್ಥನೆಗೆ ಪತ್ರ ಬರೆದರೆ, ಅದರಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇಬ್ರಾಹಿಂ ಪತ್ರ ಪಕ್ಷಕ್ಕೆ ಮಾರಕವೇ ಹೊರತು ಪೂರಕವಲ್ಲ ಎಂದು ಪಕ್ಷದ ವರಿಷ್ಠರಲ್ಲಿ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.