ಬೆಂಗಳೂರು : ರಾಜ್ಯದ ಮೂರು ಮಹಾನಗರ ಪಾಲಿಕೆಗಳ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಗೆಲ್ಲುವ ನಿಟ್ಟಿನಲ್ಲಿ ದೊಡ್ಡ ಪರಿಶ್ರಮ ನಡೆಸಿದೆ. ಇದರ ಫಲಿತಾಂಶವನ್ನೇ ಮುಂಬರುವ ಚುನಾವಣೆಗಳ ಟರ್ನಿಂಗ್ ಪಾಯಿಂಟ್ ಮಾಡಿಕೊಳ್ಳಲು ತೀರ್ಮಾನಿಸಿದೆ.
ಇಲ್ಲಿನ ಗೆಲುವು ಮುಂದೆ ಬರುವ ಬಿಬಿಎಂಪಿ ಚುನಾವಣೆ, ವಿಧಾನಸಭೆ ಉಪಚುನಾವಣೆ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೂ ದಿಕ್ಸೂಚಿಯಾಗಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿದೆ. ಸದ್ಯ ಕಾಂಗ್ರೆಸ್ ನಾಯಕರ ಗಮನ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಪಾಲಿಕೆ ಚುನಾವಣೆಯತ್ತ ನೆಟ್ಟಿದೆ. ಸೆ.5ಕ್ಕೆ ಮತದಾನ ನಡೆಯುವ ಈ ಮೂರು ಪಾಲಿಕೆಗಳಲ್ಲಿ ಗೆಲುವು ಸಾಧಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಅದು ಸರ್ಕಾರದ ವಿರುದ್ಧ ಸಾಧಿಸುವ ಗೆಲುವಾಗಿ ಪರಿಣಮಿಸಲಿದೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಎರಡು ದಿನ ಬೆಳಗಾವಿ, ಹುಬ್ಬಳ್ಳಿಯಲ್ಲಿ ಸಂಚರಿಸಿ, ಕಾರ್ಯಕರ್ತರಲ್ಲಿ, ಅಭ್ಯರ್ಥಿಗಳಲ್ಲಿ ನಿರೀಕ್ಷೆಯನ್ನು ತುಂಬಿ ಬಂದಿದ್ದಾರೆ. ಬಿಜೆಪಿಯಲ್ಲಿನ ಗೊಂದಲ ಈ ಸಾರಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಿ ಲಭಿಸಲಿದೆ ಎಂಬ ನಂಬಿಕೆ ನಾಯಕರದ್ದಾಗಿದೆ. ಸದ್ಯ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲು ಸಜ್ಜಾಗುವುದಕ್ಕೆ ನಿಸರ್ಗ ಚಿಕಿತ್ಸೆಗೆ ಮೊರೆ ಹೋಗಿದ್ದಾರೆ. ಜಿಂದಾಲ್ ನಿಸರ್ಗ ಚಿಕಿತ್ಸಾಲಯದಲ್ಲಿ 10 ದಿನದ ಆರೋಗ್ಯ ಸುಧಾರಣಾ ಕಾರ್ಯಕ್ರಮ ಮುಗಿಸಿ ಸದ್ಯವೇ ಹಿಂದಿರುಗಲಿದ್ದಾರೆ.
ಅಷ್ಟರಲ್ಲಿ ಈ ಚುನಾವಣೆಗಳೂ ಮುಗಿದು ಫಲಿತಾಂಶದ ನಿರೀಕ್ಷೆ ಆರಂಭವಾಗಲಿದೆ. ಗೆಲುವು ಲಭಿಸಿದರೆ ಅದನ್ನು ಆಧಾರವಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಹುರಿದುಂಬಿಸುವ ಕಾರ್ಯಕ್ಕೆ ಮುಂದಾಗಲು ಕಾಂಗ್ರೆಸ್ ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ.
ಅಧಿಕಾರದ ಚುಕ್ಕಾಣಿ ಹಿಡಿಯುವ ಸಿದ್ಧತೆ : ಈಗಾಗಲೇ ರಾಜ್ಯಾದ್ಯಂತ ಸುತ್ತಿ ಪಕ್ಷವನ್ನು ಕಟ್ಟುವ ಕಾರ್ಯದಲ್ಲಿ ತೊಡಗಿರುವ ಕಾಂಗ್ರೆಸ್ ನಾಯಕರಿಗೆ ರಾಷ್ಟ್ರೀಯ ನಾಯಕರು ಸಹ ಸಾಥ್ ನೀಡಿದ್ದಾರೆ. ಪಕ್ಷದ ವಿವಿಧ ಘಟಕಗಳಿಗೆ ಅಧ್ಯಕ್ಷರ ನೇಮಕ ಆರಂಭವಾಗಿದೆ. ಕೆಪಿಸಿಸಿ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳ ನೇಮಕ ಸಹ ಶೀಘ್ರವೇ ಆರಂಭವಾಗಲಿದೆ ಎಂಬ ಮಾಹಿತಿ ಇದೆ. ಒಟ್ಟಾರೆ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಕಾಂಗ್ರೆಸ್ ಶತಪ್ರಯತ್ನ ನಡೆಸಿದ್ದು, 2023ಕ್ಕೆ ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಿದ್ಧತೆಗೆ ಮುಂದಾಗಿದೆ.
ಧನಾತ್ಮಕ ಚಿಂತನೆ : 2023ರ ವಿಧಾನಸಭೆ ಚುನಾವಣೆಯನ್ನು ದ್ಯೇಯವಾಗಿಟ್ಟುಕೊಂಡು ಅದಕ್ಕೂ ಮುನ್ನ ಬರುವ ಎಲ್ಲಾ ಚುನಾವಣೆಯಲ್ಲೂ ಮೇಲುಗೈ ಸಾಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಜನರ ದೃಷ್ಟಿಯಲ್ಲಿ ಕಾಂಗ್ರೆಸ್ ಪರವಾದ ಅಲೆ ರಾಜ್ಯದಲ್ಲಿ ಏರ್ಪಡುತ್ತಿದೆ ಎನ್ನುವುದನ್ನು ಪ್ರಾಯೋಗಿಕವಾಗಿ ತೋರಿಸುವ ಉದ್ದೇಶವನ್ನೂ ಹೊಂದಲಾಗಿದೆ. ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಗೆಲ್ಲುತ್ತಿದೆ ಎಂಬ ಧನಾತ್ಮಕ ಚಿಂತನೆ ಬಿತ್ತುವ ಯತ್ನದಲ್ಲಿ ತೊಡಗಿಸಿಕೊಳ್ಳುವ ಜತೆಗೆ ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡುತ್ತಿಲ್ಲ ಎನ್ನುವುದನ್ನೂ ಬಿಂಬಿಸುವುದು ಕಾಂಗ್ರೆಸ್ ಉದ್ದೇಶವಾಗಿದೆ.
ಕಾರ್ಯರೂಪಕ್ಕೆ ಬರಲಿದೆ : ಇದರಿಂದ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ನಾಯಕರೆಲ್ಲಾ ರಾಜ್ಯ ಸುತ್ತಿ ಸರ್ಕಾರದ ತಪ್ಪನ್ನು ತೋರಿಸುವ ಹಾಗೂ ಕಾಂಗ್ರೆಸ್ ಜನರಿಗೆ ಅನಿವಾರ್ಯ ಎಂಬ ವಿಚಾರವನ್ನು ಮನಸ್ಸಿನಲ್ಲಿ ಬಿತ್ತುವ ಕಾರ್ಯಕ್ಕೆ ಮುಂದಾಗಲಿದೆ. ಇದಕ್ಕೆ ಸಿದ್ಧತೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ.
ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಎರಡು ದಿನ ಪ್ರವಾಸದಲ್ಲಿ ಸಹ ಪಕ್ಷದ ಮುಖಂಡರ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಸಾರಿ ಗೆಲ್ಲಲೇಬೇಕು. ಗೆದ್ದರೆ ಅದು ಮುಂದಿನ ದಿನಗಳಲ್ಲಿ ಬದಲಾವಣೆಗೆ ಮುನ್ನುಡಿ ಹಾಡಿದಂತೆ ಆಗಲಿದೆ. ಅಲ್ಲದೇ ರಾಜ್ಯದಲ್ಲಿ ಹೊಸದೊಂದು ಅಲೆ ಸೃಷ್ಟಿಸಿದ ಕೀರ್ತಿ ಈ ಭಾಗದ ಮುಖಂಡರು, ಮತದಾರರಿಗೆ ಲಭಿಸಲಿದೆ.
ಈಗಾಗಲೇ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ಪರ್ಯಾಯ ನಾವೇ ಎನ್ನುವುದು ಅವರಿಗೆ ಅರಿವಿದೆ. ನಾವು ಸಹ ನಿಮ್ಮ ನಂಬಿಕೆಗೆ ಅರ್ಹರು ಎನ್ನುವುದನ್ನು ತೋರಿಸಿಕೊಳ್ಳಬೇಕೆಂದು ಕರೆಕೊಟ್ಟು ಬಂದಿದ್ದಾರೆ. ಕಾಂಗ್ರೆಸ್ ಮಹಾನಗರ ಪಾಲಿಕೆ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಮುಂಬರುವ ಚುನಾವಣೆಗಳ ಗೆಲುವಿಗೆ ಇಲ್ಲಿನ ಗೆಲುವನ್ನು ನಾಂದಿಯಾಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.
ಓದಿ: COVID: 2ನೇ ಅಲೆಯಲ್ಲಿ ಮೊದಲ ಬಾರಿಗೆ ಗಣನೀಯ ಇಳಿಕೆ ಕಂಡ ಸೋಂಕಿತರ ಸಂಖ್ಯೆ