ಬೆಂಗಳೂರು: ಸಂಸದ ಪ್ರತಾಪ್ ಸಿಂಹ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ದೇವರಿದ್ದಂಗೆ ಅನ್ನೋ ಹೇಳಿಕೆಗೆ ಕೈ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಮಾತನಾಡಿ, ಮೋದಿ ಅವರು ಪ್ರತಾಪ್ ಸಿಂಹಗೆ ದೇವರು ಇರಬಹುದು. ಅವರು ಬೇಕಾದರೆ ಮೋದಿಗೆ ಪೂಜೆ ಮಾಡಿಕೊಳ್ಳಲಿ. ಪ್ರವಾಹ ಪರಿಸ್ಥಿತಿ ನಿಭಾಯಿಸುವುದರಲ್ಲಿ ಅವರು ಎಡವಿದ್ದಾರೆ. ನಮಗೆ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಹಣ ಬೇಕು ಅಷ್ಟೇ ಎಂದರು.
ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, 20 ಲಕ್ಷ ಜನರು ಮನೆ-ಮಠ ಕಳೆದುಕೊಂಡಿದ್ದಾರೆ. ಆದರೆ ಆ ಬಗ್ಗೆ ಅನುಕಂಪ ತೋರಿಸದೆ ಬಕೆಟ್ ಪಾಲಿಟಿಕ್ಸ್ ಮಾಡ್ತಿರುವ, ಭಟ್ಟಂಗಿತನ ಮಾಡ್ತಿರುವ ವ್ಯಕ್ತಿ ದೇವರಾಗಲು ಸಾಧ್ಯವಿಲ್ಲ. ಇದು ಖಂಡನೀಯ. ಮೋದಿ ಜನ ವಿರೋಧಿ, ರೈತ ವಿರೋಧಿ ಎಂದು ಕಿಡಿಕಾರಿದರು.
ಇದೇ ವೇಳೆ ಮಾಜಿ ಸಚಿವ ಹೆಚ್.ಕೆ.ಪಾಟೀಲ ಮಾತನಾಡಿ, ಮೋದಿಗೆ ಬೈದ್ರೆ ದೇವರನ್ನ ಬೈದಂಗೆ ಅನ್ನೋ ಪ್ರತಾಪ್ ಸಿಂಹ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಉತ್ತರ ಕರ್ನಾಟಕದಲ್ಲಿ ನೆರೆಯಿಂದ ನೂರಾರು ಜನ ಸಾವನ್ನಪ್ಪಿದ್ದಾರೆ. ಬೆಳೆ ಹಾನಿಯಾಗಿದೆ, ಜಾನುವಾರುಗಳು ಸತ್ತಿವೆ. ಜನರು ನೆಲೆ ಕಳೆದುಕೊಂಡಿದ್ದಾರೆ. ಆದರೆ ಈವರೆಗೂ ಇವರ ನೆರವಿಗೆ ಬಾರದ ಪ್ರಧಾನಿ ವರ್ತನೆ ಅವರ ಬೇಜವಾಬ್ದಾರಿಯನ್ನ ತೋರಿಸುತ್ತದೆ. ಇದೂವರೆಗೂ ಆ ಜನರ ಕಣ್ಣೀರು ಒರೆಸುವ ಪ್ರಯತ್ನ ಮಾಡಿಲ್ಲ. ಪ್ರಜ್ಞಾವಂತ ಸಂಸದರಾಗಿ ಹೀಗೆ ಹೇಳಿದ್ದು ಸರಿಯಲ್ಲ. ರಾಜ್ಯದ ಜನರ ಬಗ್ಗೆ ಅನುಕಂಪ ತೋರಿಸದ ಪ್ರಧಾನಿ ದೇವ್ರಾ? ದೇವರು, ದೇವ ಮಾನವ ಅನ್ನೋದನ್ನ ಬಿಡಿ. ಅದು ನಮ್ಮ ದೇಶದಲ್ಲಿ ನಡೆಯಲ್ಲ ಎಂದರು.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಯಾವ ಸಿಂಹ ನಡೀರಿ ಅತ್ಲಾಗೆ ಎನ್ನುತ್ತಾ ಅವರನ್ನೂ, ಅವರ ಹೇಳಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ತಳ್ಳಿಹಾಕಿ ಮುನ್ನಡೆದರು.