ಬೆಂಗಳೂರು: ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ನಾವು ನ್ಯಾಯಾಲಯದ ಆದೇಶ, ನಿರ್ದೇಶನದ ಬಗ್ಗೆ ಮಾತನಾಡುತ್ತಿಲ್ಲ. ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೇಳಿದ್ದಾರೆ.
ನಗರದ ಮೌರ್ಯ ವೃತ್ತದ ಬಳಿ ಮಾತನಾಡಿದ ದಿನೇಶ್ ಗುಂಡೂರಾವ್, ಶಿವಕುಮಾರ್ ಅರ್ಜಿ ತಿರಸ್ಕಾರ ಆಗಿದೆ. ಕೋರ್ಟ್ ಆದೇಶವನ್ನ ಪ್ರಶ್ನೆ ಮಾಡುತ್ತಿಲ್ಲ. ಆದರೆ, ಕೇಂದ್ರ ಸರ್ಕಾರ ಸಿಬಿಐ ,ಇಡಿ, ಐಟಿ ಸೇರಿ ಎಲ್ಲಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರಭಾವಿ ನಾಯಕರನ್ನ ಹೆದರಿಸೋ ಕೆಲಸ ಮಾಡ್ತಿದೆ. ಇದು ಸರಿಯಲ್ಲ. ಈ ಬಗ್ಗೆ ಡಿ.ಕೆ.ಶಿವಕುಮಾರ್ ಕಾನೂನು ರೀತಿಯಲ್ಲಿ ಹೋರಾಟ ಮಾಡ್ತಾರೆ ಎಂದರು.
ಮುಂದುವರೆದು ಮಾತನಾಡಿದ ಅವರು, ಈ ಕ್ರಮಗಳ ಮೂಲಕ ಕೇಂದ್ರ ವಿಪಕ್ಷ ನಾಯಕರನ್ನ ಟಾರ್ಗೆಟ್ ಮಾಡ್ತಿದೆ. ಇನ್ನು ಬಿಜೆಪಿ ನಾಯಕರ ಮೇಲೆ ದೊಡ್ಡ ದೊಡ್ಡ ಪ್ರಕರಣಗಳೇ ಇವೆ. ಆದ್ರೆ, ಅವರ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ. ಬದಲಿಗೆ ವಿಪಕ್ಷ ನಾಯಕರನ್ನ ರಾಜಕೀಯವಾಗಿ ಮುಗಿಸಲು ಕೇಂದ್ರ ಸರ್ಕಾರ ಅಧೀನ ಸಂಸ್ಥೆಗಳನ್ನ ಬಳಸಿಕೊಳ್ಳುತ್ತಿದೆ ಎಂದು ದೂರಿದರು.
ಇದೇ ವೇಳೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಏಕಸದಸ್ಯ ಪೀಠ ತೀರ್ಪು ಕೊಟ್ಟಿದೆ. ಇದನ್ನ ಡಿಕೆಶಿ ವಿಭಾಗೀಯ ಪೀಠದ ಮುಂದೆ ಪ್ರಶ್ನೆ ಮಾಡಬಹುದು. ಸುಪ್ರೀಂ ಕೋರ್ಟ್ವರೆಗೂ ಹೋಗಬಹುದು. ಆದ್ರೆ ಇಲ್ಲಿ ನಮ್ಮ ಗಮನಕ್ಕೆ ಬರುತ್ತಿರುವುದು ಕೇಂದ್ರ, ಇಡಿ ಮತ್ತು ಐಟಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳನ್ನ ಎದುರಿಸಲು ಸಾಧ್ಯವಿಲ್ಲದವರು ಈ ರೀತಿಯ ಕೃತ್ಯ ಮಾಡ್ತಾರೆ ಎಂದು ಟೀಕಿಸಿದರು.