ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರ ನಿಯೋಗ ಇಂದು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟು ಅಲ್ಲಿನ ಸ್ಥಿತಿ ಅರಿಯುವ ಪ್ರಯತ್ನ ಮಾಡಿತು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಭೇಟಿಕೊಟ್ಟ ಕಾಂಗ್ರೆಸ್ ನಿಯೋಗ ಕಾರ್ಮಿಕರ ಸಮಸ್ಯೆ ಆಲಿಸಿತು.
ಜನರ ಮಾಹಿತಿ ಸ್ವೀಕರಿಸಿದ ನಂತರ ಹೆಚ್ಚುವರಿ ಬಸ್ ವ್ಯವಸ್ಥೆ, ಅಗತ್ಯ ಊಟೋಪಚಾರ ಸೌಲಭ್ಯ ಕಲ್ಪಿಸಬೇಕು ಹಾಗೂ ಅಗತ್ಯವಿರುವಷ್ಟು ಬಸ್ ವ್ಯವಸ್ಥೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಸರ್ಕಾರವನ್ನು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ವಲಸೆ ಕಾರ್ಮಿಕರಿಗೆ ತಮ್ಮೂರಿಗೆ ತೆರಳಲು ಉಚಿತ ಸಾರಿಗೆ ವ್ಯವಸ್ಥೆ ಒದಗಿಸಿ ಎಂದು ಕೋರಿಕೊಂಡಿದ್ದೆವು. ನಿರ್ಲಕ್ಷ್ಯ ತೋರಿದ ಸರ್ಕಾರ ಕೊನೆಗೆ ಎರಡರಷ್ಟು ಬೇಡ, ಪ್ರಯಾಣಕ್ಕೆ ತಗುಲುವ ವೆಚ್ಚ ಭರಿಸಲೇಬೇಕೆಂದು ತಿಳಿಸಿದೆ. ಹಾಗಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ನಾವೇ 1 ಕೋಟಿ ರೂ. ಹಣವನ್ನು ಹಸ್ತಾಂತರಿಸಿದ್ದೇವೆ. ಕೊರತೆ ಬಿದ್ದಲ್ಲಿ ಇನ್ನಷ್ಟು ನೀಡುವುದಾಗಿ ಭರವಸೆ ನೀಡಿದ್ದೇವೆ ಎಂದು ತಿಳಿಸಿದರು. ಇನ್ನೂ ನಾವು ಚೆಕ್ ನೀಡಿದ ಬಳಿಕ ಎಚ್ಚೆತ್ತ ಸರ್ಕಾರ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ.
ಸರ್ಕಾರಿ ಬಸ್ ಕೊರತೆ ಎದುರಾದರೆ ಖಾಸಗಿ ಬಸ್ ಪಡೆದು ಅವಕಾಶ ಮಾಡಿಕೊಡಬೇಕು, ಇದಕ್ಕೆ ಅಗತ್ಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಈಗಾಗಲೇ ಬಸ್ ನಿಲ್ದಾಣದಲ್ಲಿ ಸಾಕಷ್ಟು ಮಂದಿ ಕಾಯುತ್ತಿದ್ದಾರೆ. ಅವರಿಗೆ ಬೇಕಾದ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕೆಂದರು. ಈಗಾಗಲಲೇ ನಮ್ಮ ಪಕ್ಷದ ಕಾರ್ಯಕರ್ತರು ಸೂಕ್ತ ವ್ಯವಸ್ಥೆ ಒದಗಿಸಿದ್ದಾರೆ. ನಿನ್ನೆ 150 ಬಸ್ ತೆರಳಿದ್ದು, ಇಂದು 250 ಬಸ್ ತೆರಳಲಿದೆಯಂತೆ, ಇದು ಸಾಲೋದಿಲ್ಲ. ಹಾಗಾಗಿ ಇನ್ನಷ್ಟು ಬಸ್ಗಳನ್ನು ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಸರ್ಕಾರದ ಸಚಿವರಿಗೆ ಕಣ್ಣು-ಕಿವಿ ಹೃದಯ ಇಲ್ಲವಾಗಿದೆ. ಈಗಾಗಲೇ ನಾನು ತಿಳಿಸಿದ್ದೇನೆ, ಭಿಕ್ಷೆ ಬೇಡಿಯಾದರೂ ಕಾರ್ಮಿಕರಿಗೆ ಹಣ ನೀಡುತ್ತೇನೆ. ಹಾಗಾಗಿ ಸರ್ಕಾರ ಲಾಕ್ಡೌನ್ನಲ್ಲಿ ಸಿಲುಕಿದವರಿಗೆ ಸಹಾಯ ಮಾಡಲಿ. ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ನಿಲ್ದಾಣಕ್ಕೆ ಬರಲು ಮನವಿ ಮಾಡಿದ್ದೇವೆ, ಬಿಜೆಪಿ ಶಾಸಕರು ಸಚಿವರು ಕಾರ್ಯನಿರ್ವಹಿಸದಿದ್ದರೆ ಪರವಾಗಿಲ್ಲ. ನಾವು ಜನಸೇವೆಗೆ ಮುಂದಾಗಿದ್ದೇವೆಂದು ತಿಳಿಸಿದರು.
ಈಗಾಗಲೇ ಬೇರೆ ರಾಜ್ಯಗಳು ಕಾರ್ಮಿಕರು ತೆರಳಲೆಂದು ರೈಲು ಸೇರಿ ಇತರೆ ಸಾರಿಗೆ ವ್ಯವಸ್ಥೆ ಮಾಡಿದ್ದಾರೆ. ಈ ವಿಷಯದಲ್ಲಿ ನಮ್ಮ ಸರ್ಕಾರ ಮಾತ್ರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಪಕ್ಷದ ಶಾಸಕರು ಅಭಿಮಾನಿಗಳು ನೀಡಿದ ಹಣವನ್ನು ಸಂಗ್ರಹಿಸಿ ನಾವು ಕೆಎಸ್ಆರ್ಟಿಸಿ ಸಂಸ್ಥೆಗೆ ನೀಡಲಿದ್ದೇವೆ. ಮೂರಲ್ಲ ಕನಿಷ್ಠ ಆರು ದಿನಗಳ ಕಾಲ ಕಾರ್ಮಿಕರು ತೆರಳಲು ಬಸ್ ಸೌಲಭ್ಯ ಕಲ್ಪಿಸಬೇಕು. ಅದಕ್ಕೆ ಇನ್ನಷ್ಟು ಹಣ ಅಗತ್ಯವಿದ್ದರೆ ನೀಡಲು ಪಕ್ಷ ಸಿದ್ಧವಿದೆ ಎಂದರು.