ಬೆಂಗಳೂರು: "ಶರಣರ ಗುಣವನ್ನು ಮರಣದಲ್ಲಿ ಕಾಣು ಎಂಬಂತೆ ಚಂದ್ರೇಗೌಡರು ಕನ್ನಡ, ಕರ್ನಾಟಕ ಅಭಿವೃದ್ಧಿಗೆ ದಾರಿ ಹಾಕಿಕೊಟ್ಟು ಇಹಲೋಕ ತ್ಯಜಿಸಿದ್ದಾರೆ. ಅವರ ಕುಟುಂಬದವರು, ಬಂಧುಗಳು, ಅಭಿಮಾನಿಗಳಿಗೆ ಅವರ ಸಾವಿನ ನೋವು ಅರಗಿಸಿಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.
ಆಪ್ತವಲಯದಲ್ಲಿ ಡಿಬಿಸಿ ಎಂದೇ ಪ್ರಸಿದ್ದರಾಗಿದ್ದ ಡಿ.ಬಿ.ಚಂದ್ರೇಗೌಡರನ್ನು ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ. ಅವರ ನಿಧನದಿಂದ ಮಲೆನಾಡಿನ ಭಾಗದಿಂದ ಬಂದಂತಹ ಸಮಾಜವಾದದ ಗಟ್ಟಿಕೊಂಡಿ, ನಿರ್ಮಲ ಮನಸ್ಸಿನ ವ್ಯಕ್ತಿತ್ವವೊಂದು ಕಳಚಿಬಿದ್ದಂತಾಗಿದೆ. ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾ ಗಾಂಧಿ ಅವರು ಸಂಕಷ್ಟದಲ್ಲಿದ್ದಾಗ 1978ರಲ್ಲಿ ಚಂದ್ರೇಗೌಡರು ತಮ್ಮ ಸಂಸತ್ ಸದಸ್ಯ ಸ್ಥಾನವನ್ನು ಬಿಟ್ಟುಕೊಟ್ಟು, ಇಂದಿರಾಗಾಂಧಿ ಗೆಲುವಿಗೆ ಹಗಲು-ರಾತ್ರಿ ದುಡಿದು ಇಡೀ ದೇಶದ ಗಮನ ಸೆಳೆದಿದ್ದರು ಎಂದು ಡಿ.ಕೆ.ಶಿವಕುಮಾರ್ ಸ್ಮರಿಸಿದ್ದಾರೆ.
ಮಾಜಿ ಸಿಎಂ ದೇವರಾಜ ಅರಸು, ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿ, ವಿಧಾನಸಭೆಯ ಸ್ಪೀಕರ್ ಆಗಿ, ರಾಜ್ಯಸಭೆಯ ಸದಸ್ಯರಾಗಿದ್ದರು. ವಿಧಾನ ಮಂಡಲ ಹಾಗೂ ಸಂಸತ್ತಿನ ಎಲ್ಲ ನಾಲ್ಕೂ ಸದನಗಳ ಸದಸ್ಯರಾಗಿದ್ದ ಹೆಗ್ಗಳಿಕೆ ಇವರದು. ಸುಮಾರು ಐದು ದಶಕಗಳ ಕಾಲ ಈ ರಾಜ್ಯಕ್ಕೆ ತಮ್ಮ ಸಮಾಜವಾದಿ ಚಿಂತನೆಗಳ ಮೂಲಕ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದವರು. ಚಂದ್ರೇಗೌಡರ ಆಡಳಿತ ವೈಖರಿಯನ್ನು ಹತ್ತಿರದಿಂದ ನೋಡಿದ ಸೌಭಾಗ್ಯ ನನ್ನದು. ವಿಧಾನಸಭೆ, ಪರಿಷತ್‌ಗಳಲ್ಲಿ ಅವರ ಆಳವಾದ, ವಿದ್ವತ್ ಪೂರ್ಣವಾದ ವಿಚಾರ ಮಂಡನೆ ಎಲ್ಲರನ್ನೂ ಸೆಳೆಯುತ್ತಿತ್ತು. ಆಡಳಿತ ಪರಿಶುದ್ದತೆ, ವೈಚಾರಿಕ, ಜನಪರ ಚಿಂತನೆಗಳಿಗೆ ಹೆಸರಾಗಿದ್ದ ಅವರು ಕಿರಿಯ ರಾಜಕಾರಣಿಗಳಿಗೆ ಮಾದರಿಯಾಗಿದ್ದರು ಎಂದು ಡಿಕೆಶಿ ಕೊಂಡಾಡಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂತಾಪ ಸೂಚಿಸಿ, ನಾಲ್ಕು ಸದನಗಳನ್ನು ಪ್ರವೇಶಿಸಿದ್ದ ಅಪರೂಪದ ರಾಜಕಾರಣಿ ಎನಿಸಿಕೊಂಡಿದ್ದ ಗೌಡರು, ಮೂರು ಬಾರಿ ಸಂಸದರಾಗಿ, ಶಾಸಕರಾಗಿ ಜನ ಮನ್ನಣೆ ಗಳಿಸಿದ್ದರು. ಚಂದ್ರೇಗೌಡರ ನಿಧನದಿಂದ ಕರ್ನಾಟಕ ಓರ್ವ ಮುತ್ಸದ್ಧಿ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗಾಗಿ ಚಿಕ್ಕಮಗಳೂರು ಲೋಕಸಭಾ ಸದಸ್ಯತ್ವ ಸ್ಥಾನವನ್ನು ತ್ಯಾಗ ಮಾಡಿದ್ದರು. ಡಿ.ಬಿ.ಚಂದ್ರೇಗೌಡರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಹಿರಿಯ ರಾಜಕಾರಣಿ, ಪ್ರಖರ ಸಮಾಜವಾದಿ ಡಿ.ಬಿ.ಚಂದ್ರೇಗೌಡರು ನಿಧನರಾದ ಸುದ್ದಿ ದುಃಖ ತಂದಿದೆ. ನಾಲ್ಕೂವರೆ ದಶಕಗಳ ಕಾಲ ರಾಜಕೀಯ ಜೀವನ ನಡೆಸಿದ ಡಿ.ಬಿ.ಚಂದ್ರೇಗೌಡರು ಜನಾನುರಾಗಿ ನಾಯಕರಾಗಿದ್ದರು. ಲೋಕಸಭೆ,ರಾಜ್ಯಸಭೆ,ವಿಧಾನಸಭಾ ಹಾಗೂ ವಿಧಾನ ಪರಿಷತ್‌ಗಳನ್ನು ಪ್ರತಿನಿಧಿಸುವ ಮೂಲಕ ನಾಲ್ಕೂ ಸದನಗಳ ಸದಸ್ಯರಾಗಿದ್ದ ಹೆಗ್ಗಳಿಕೆ ಚಂದ್ರೇಗೌಡರದ್ದು. 1978ರಲ್ಲಿ ಇಂದಿರಾಗಾಂಧಿಯವರಿಗಾಗಿ ಚಿಕ್ಕಮಗಳೂರು ಸಂಸತ್ ಕ್ಷೇತ್ರವನ್ನು ತ್ಯಾಗ ಮಾಡುವ ಮೂಲಕ ಚಂದ್ರೇಗೌಡರು ಇಂದಿರಾಗಾಂಧಿಯವರ ರಾಜಕೀಯ ಮರುಜನ್ಮಕ್ಕೆ ಕೂಡ ಕಾರಣವಾಗಿದ್ದರು. ವಿಪಕ್ಷ ನಾಯಕ, ಸ್ಪೀಕರ್ ಹಾಗೂ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಡಿ.ಬಿ ಚಂದ್ರೇಗೌಡರು ನಾನು ಕಂಡಂತೆ ಆದರ್ಶ ಮತ್ತು ತತ್ವಾಧಾರಿತ ರಾಜಕಾರಣಿ. ಚಂದ್ರೇಗೌಡರ ಆತ್ಮಕ್ಕೆ ಸದ್ಗತಿಗಳು ಎಂದು ಸಚಿವ ದಿನೇಶ್ ಗುಂಡೂರಾವ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಳಿದಂತೆ, ಸಚಿವರಾದ ಜಮೀರ್ ಅಹಮದ್ ಖಾನ್, ಶಿವರಾಜ್ ತಂಗಡಗಿ, ಬಿ.ನಾಗೇಂದ್ರ, ರಹೀಂ ಖಾನ್ ಸೇರಿ ಹಲವು ಸಚಿವರು ಚಂದ್ರೇಗೌಡರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಅಪರೂಪದ ಸಂಸದೀಯ ಪಟು ಡಿ ಬಿ ಚಂದ್ರೇಗೌಡರ ರಾಜಕೀಯ ಜೀವನದ ಹಿನ್ನೋಟ