ಬೆಂಗಳೂರು: ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಇಂದು ಕಲಾಪ ಸಲಹಾ ಸಮಿತಿ ಸಭೆ ನಡೆಯಿತು.
ವಿಧಾನಸೌಧದ ಮೊದಲ ಮಹಡಿಯಲ್ಲಿ ನಡೆದ ಸಭೆಯಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಪಾಲ್ಗೊಂಡಿದ್ದರು. ಜೆಡಿಎಸ್ ನಾಯಕರು ಸಭೆಗೆ ಗೈರಾಗಿದ್ದರು. ಸಿಎಂ ಬಿಎಸ್ ಯಡಿಯೂರಪ್ಪ, ಸಚಿವ ಸಂಪುಟ ಸದಸ್ಯರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಪ್ರಮುಖ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಕಳೆದ ವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಿಂದ ಕಾಂಗ್ರೆಸ್ ಪಕ್ಷ ದೂರ ಉಳಿದಿತ್ತು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿಗೆ ಬೆಲೆ ಕೊಟ್ಟು ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಈ ಬಾರಿ ಸಭೆಯಲ್ಲಿ ಭಾಗಿಯಾಗಿದ್ದರು. ವಿಪಕ್ಷ ನಾಯಕರ ಮನವೊಲಿಸುವಲ್ಲಿ ಸರ್ಕಾರ ಸಕ್ಸಸ್ ಕಂಡಿದ್ದು, ಸಿಎಂ ಬಿಎಸ್ವೈ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಡೆಸಿದ ಪ್ರಯತ್ನಕ್ಕೆ ಫಲ ಸಿಕ್ಕಿದೆ.
ಸಭೆಯಲ್ಲಿ ಪಾಲ್ಗೊಳ್ಳುವ ನಿರ್ಧಾರ ಕುರಿತಂತೆ ಮಾಜಿ ಸಚಿವ ದೇಶಪಾಂಡೆ ಮಾತನಾಡಿ, ಮೊನ್ನೆ ನಡೆದ ಬಿಎಸಿ ಸಭೆಗೆ ಬಹಿಷ್ಕಾರ ಹಾಕಿದ್ದೆವು. ಸಭೆಯಲ್ಲಿ ಆಗಿರುವ ತೀರ್ಮಾನಗಳು ಜಾರಿ ಆಗಿರಲಿಲ್ಲ. ಅದಕ್ಕಾಗಿ ಬಹಿಷ್ಕಾರ ಹಾಕಿದ್ದೆವು. ಸಿಎಂ ಹಾಗೂ ಬೊಮ್ಮಾಯಿ ನಮ್ಮ ಜೊತೆ ಮಾತಾಡಿದ್ದಾರೆ. ಇವತ್ತು ಬಿಎಸ್ಸಿ ಸಭೆಗೆ ಹಾಜರಾಗಿದ್ದೇವೆ. ಕಲಾಪ ನಡೆಯಬೇಕು ಎಂಬ ಉದ್ದೇಶದಿಂದ ಸಭೆಗೆ ಬಂದಿದ್ದೇವೆ. ಕಳೆದ ಅಧಿವೇಶನದಲ್ಲಿ ಚರ್ಚೆ ಮಾಡದ ವಿಚಾರಗಳು ಸದನದಲ್ಲಿ ಪ್ರಸ್ತಾಪ ಆಗಿದ್ದಕ್ಕೆ ಬೇಸರ ಆಗಿತ್ತು. ಸ್ಪೀಕರ್ ಕಾಗೇರಿ ಅವರು ಸಿದ್ದರಾಮಯ್ಯ ಅವರನ್ನು ಕರೆದು ಮಾತುಕತೆ ನಡೆಸಿದ್ದಾರೆ. ಹೀಗಾಗಿ ಇವತ್ತಿನ ಸಭೆಗೆ ಹಾಜರಾಗಿದ್ದೆವು ಎಂದರು.
ಓದಿ: ಬೆಂಗಳೂರು ಮೆಟ್ರೋ: ಹಂತ 2ಎ ಮತ್ತು 2ಬಿಗೆ ₹14,788 ಕೋಟಿ ಅನುದಾನ
ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಾವುದೇ ಕಾರಣಕ್ಕೂ ಬಿಎಸಿಯಲ್ಲಿ ಚರ್ಚೆ ಆಗದ ಬಿಲ್ಗಳನ್ನು ಕಲಾಪದಲ್ಲಿ ಮಂಡಿಸಬೇಡಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಎಸಿಯಲ್ಲಿ ಚರ್ಚೆ ಮಾಡದಿರುವುದನ್ನು ಏಕಾಏಕಿ ಸದನದಲ್ಲಿ ಪ್ರಸ್ತಾಪ ಮಾಡುವುದು ಸರಿಯಲ್ಲ. ಹಿಂದಿನ ಅಧಿವೇಶನದಲ್ಲಿ ಆದ ರೀತಿ ಮುಂದೆ ಆಗುವುದು ಬೇಡ ಅಂದರು.