ಬೆಂಗಳೂರು: ಕಾಂಗ್ರೆಸ್ ಪಕ್ಷದ ಮೂರನೇ ಪಟ್ಟಿ ಪ್ರಕಟವಾಗಿದ್ದು, ಇನ್ನು ಕೇವಲ 15 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಮಾತ್ರ ಬಾಕಿ ಉಳಿದಿದೆ. ಇದರಲ್ಲಿ ನಾಲ್ವರು ಶಾಸಕರ ಭವಿಷ್ಯವೂ ಅಡಗಿದ್ದು, ಕೊಂಚ ಮಂಕಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಲಿ ಶಾಸಕರ ಪೈಕಿ ಐವರಿಗೆ ಟಿಕೆಟ್ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಮೂರನೇ ಪಟ್ಟಿಯಲ್ಲಿ ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿಗೆ ಈಗಾಗಲೇ ಟಿಕೆಟ್ ಘೋಷಣೆಯಾಗಿದೆ.
ಇದೀಗ ಅವರನ್ನು ಹೊರತುಪಡಿಸಿದರೆ ಹರಿಹರ ಶಾಸಕ ರಾಮಪ್ಪ, ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಲಿಂಗಸುಗೂರು ಶಾಸಕ ಡಿ.ಎಸ್.ಹೂಲಗೇರಿ ಟಿಕೆಟ್ ಸಿಗದೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮೂಲಗಳ ಪ್ರಕಾರ, ಈ ನಾಲ್ವರಿಗೂ ಟಿಕೆಟ್ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಇವರೆಲ್ಲ ಚಿಂತೆಗೀಡಾಗಿದ್ದಾರೆ.
ಲಿಂಗಸಗೂರು ಹೂಲಗೇರಿ: ಕಲ್ಯಾಣ ಕರ್ನಾಟಕ ಪ್ರದೇಶದ ಪರಿಶಿಷ್ಟ ಜಾತಿಗೆ ಮೀಸಲಿರುವ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಲಿಂಗಸುಗೂರು ವಿಧಾನಸಭಾ ಮೀಸಲು (ಪರಿಶಿಷ್ಟ ಜಾತಿ) ಕ್ಷೇತ್ರ ಸಹ ಒಂದು. ಸ್ಥಳೀಯ ಶಾಸಕ ಡಿ.ಎಸ್.ಹೂಲಗೇರಿ ಜತೆ ಇನ್ನೂ ಹತ್ತಾರು ಮಂದಿ ಎಡಗೈ, ಬಲಗೈ ಬಣದವರು ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದಾರೆ. ಪಟ್ಟಿ ದೊಡ್ಡದಿದ್ದು ಇವರಲ್ಲಿ ಶಾಸಕ ಡಿ.ಎಸ್ ಹೂಲಗೇರಿ, ಬಂಜಾರ ಸಮಾಜದ ಚಂದ್ರಶೇಖರ ನಾಯ್ಕ, ಎಡಗೈ ಬಣದಿಂದ ಎಚ್.ಬಿ. ಮುರಾರಿ, ಪಾಮಯ್ಯ ಮುರಾರಿ, ಹನುಮಂತಪ್ಪ ಆಲ್ಕೋಡ್, ಕಿರಿಲಿಂಗಪ್ಪ ಕವಿತಾಳ, ಅಂಜನಪ್ಪ ರಾಯಚೂರು, ಬಲಗೈ ಬಣದ ಆರ್.ರುದ್ರಯ್ಯ, ರಾಜಶೇಖರ ರಾಮಸ್ವಾಮಿ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ವಿಪರ್ಯಾಸ ಅಂದರೆ, ಶಾಸಕ ಡಿ.ಎಸ್.ಹೂಲಗೇರಿಗೆ ಟಿಕೆಟ್ ಸಿಗುವುದಿಲ್ಲ. ಹೈಕಮಾಂಡ್ ಪರ್ಯಾಯ ಅಭ್ಯರ್ಥಿ ಗುರುತಿಸಿದೆ ಎಂಬ ಮಾತು ಬಹಳ ಹಿಂದಿನಿಂದಲೂ ಕೇಳಿಬರುತ್ತಿದೆ. ಆದರೆ ಇಷ್ಟು ಸಮಯದ ವರೆಗೂ ಟಿಕೆಟ್ ಘೋಷಿಸದೇ ಉಳಿದಿರುವುದು ಸದ್ಯ ಕುತೂಹಲಕ್ಕೆ ಕಾರಣವಾಗಿದ್ದು, ಹೂಲಗೇರಿಗೆ ತೀವ್ರ ನಿರಾಸೆ ಮೂಡಿದೆ ಎಂಬ ಮಾತಿದೆ.
ಶಿಡ್ಲಘಟ್ಟ ಮುನಿಯಪ್ಪ: ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿಲ್ಲ. ಸೋಲುವ ಸಾಧ್ಯತೆ ಹೆಚ್ಚಿದೆ ಎಂಬ ಮಾತು ಸಹ ಕೇಳಿಬರುತ್ತಿದೆ. ವಯಸ್ಸಿನ ಕಾರಣದಿಂದ ತಮ್ಮ ಬದಲು ಪುತ್ರನಿಗೆ ಟಿಕೆಟ್ ಕೇಳಿದ್ದಾರೆ ಎನ್ನಲಾಗುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಿಂದ ಕೆಪಿಸಿಸಿ ಅರ್ಜಿ ಆಹ್ವಾನಿಸಿದ್ದ ಸಂದರ್ಭದಲ್ಲಿ ಶಿಡ್ಲಘಟ್ಟ ಕ್ಷೇತ್ರದಿಂದ ಆಕಾಂಕ್ಷಿಗಳಾಗಿ ಮೂವರು ಅರ್ಜಿ ಸಲ್ಲಿಸಿದ್ದರು. ಹಾಲಿ ಶಾಸಕ ವಿ. ಮುನಿಯಪ್ಪ ಅರ್ಜಿ ಸಲ್ಲಿಸಿದ್ದು, ಜತೆಗೆ ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಸಹ ಅರ್ಜಿ ಸಲ್ಲಿಕೆ ಮಾಡಿದ್ದರು. ಕ್ಷೇತ್ರದಲ್ಲಿ ಶಾಸಕ ಸ್ಥಾನ ಕೈ ಬಿಡುವಂತೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಮುಖಂಡರ ಜತೆ ಕಾಣಿಸಿಕೊಳ್ಳುತ್ತಿರುವ ರಾಜೀವ್ ಗೌಡ ನನಗೆ 30 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದಾರೆ. ಇದಕ್ಕೆ ನಾನು ನಿರಾಕರಿಸಿದ್ದೇನೆ. ಜತೆಗೆ ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಸ್ಪರ್ಧಿಸುತ್ತೇನೆ ಎಂದು ಸಹ ಮುನಿಯಪ್ಪ ಹೇಳಿಕೊಂಡು ವಿವಾದ ಸೃಷ್ಟಿಸಿಕೊಂಡಿದ್ದಾರೆ. 1983ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ವಿ. ಮುನಿಯಪ್ಪ ಆಯ್ಕೆಯಾದರು. 1985ರಲ್ಲಿ ನಡೆದ ಚುನಾವಣೆಯಲ್ಲಿ ಮುನಿಯಪ್ಪ ಸೋಲು ಅನುಭವಿಸಿದರು. 1989, 1994 ಮತ್ತು 1999ರ ಚುನಾವಣೆಗಳಲ್ಲಿ ವಿ. ಮುನಿಯಪ್ಪ ಹ್ಯಾಟ್ರಿಕ್ ವಿಜಯ ಸಾಧಿಸಿದರು.
2004ರ ಚುನಾವಣೆಯಲ್ಲಿ ಗೆಲ್ಲಲಾಗಲಿಲ್ಲ. 2008ರಲ್ಲಿ ಮುನಿಯಪ್ಪ ಮತ್ತೆ ಶಾಸಕರಾದರು. 2013ರ ಚುನಾವಣೆಯಲ್ಲಿ ಸೋತ ಮುನಿಯಪ್ಪ, 2018ರಲ್ಲಿ ಮತ್ತೆ ಗೆಲುವಿನ ನಗೆ ಬೀರಿದರು. ಹೀಗೆ 1983ರಿಂದ 2018ರವರೆಗೆ ಆರು ಬಾರಿ ಅವರು ಶಾಸಕರಾಗಿದ್ದಾರೆ. ಈ ಸಾರಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಪುಲಕೇಶಿನಗರ ಅಖಂಡ ಶ್ರೀನಿವಾಸ್ ಮೂರ್ತಿ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಿಂದ ನಕರಾತ್ಮಕವಾಗಿ ಗಮನಸೆಳೆದಿದ್ದ ಬೆಂಗಳೂರಿನ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದ್ದು, ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರ ಜತೆ ಚರ್ಚಿಸಿರುವ ಅವರು ಸಂಜೆಯ ವೇಳೆಗೆ ಒಂದು ನಿರ್ಧಾರಕ್ಕೆ ಬಂದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಲು ಶಿರಸಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆ ಗುರುತಿಸಿಕೊಂಡಿರುವ ಮಾಜಿ ಶಾಸಕ ಪ್ರಸನ್ನ ಕುಮಾರ್ ಅಥವಾ ಮಾಜಿ ಮೇಯರ್ ಸಂಪತ್ರಾಜ್ಗೆ ಟಿಕೆಟ್ ಸಿಗುವ ಸಾಧ್ಯತೆ ಇದ್ದು, ಮರಳಿ ಜೆಡಿಎಸ್ ಕಡೆ ಮುಖ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಅಖಂಡಗೆ ಡಿಜೆಹಳ್ಳಿ, ಕೆಜಿ ಹಳ್ಳಿ ಘಟನೆ ಮುಳುವಾಗಿದೆ.
ಹರಿಹರ ರಾಮಪ್ಪ: ನನಗೆ ಟಿಕೆಟ್ ಕೊಡುವುದಾಗಿ ಹೈಕಮಾಂಡ್ ಹೇಳಿದೆ. ಸ್ಕ್ರೀನಿಂಗ್ ಕಮಿಟಿಯಲ್ಲೂ ನನ್ನ ಹೆಸರನ್ನು ದೆಹಲಿಗೆ ಕಳಿಸಲಾಗಿದೆ. ನನಗೆ ಟಿಕೆಟ್ ಬಗ್ಗೆ ಏನೂ ಅನುಮಾನ ಇಲ್ಲ ಎಂದು ಹರಿಹರ ಶಾಸಕ ಎಸ್.ರಾಮಪ್ಪ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಮೂರನೇ ಪಟ್ಟಿ ಪ್ರಕಟವಾದರೂ ಹೆಸರು ಬರದಿರುವುದು ಹಾಗೂ ನಾಲ್ಕನೆಯದರಲ್ಲಿ ಬರುವುದು ಅನುಮಾನ ಎಂದು ಹೇಳುತ್ತಿರುವುದು ರಾಮಪ್ಪ ಅವರಿಗೆ ತೀವ್ರ ಆತಂಕ ತರಿಸಿದೆ. ಮಾ.24 ರಂದು ತಮ್ಮ ಮನೆ ಬಳಿ ತಳ್ಳಾಟ, ನೂಕಾಟ ನಡೆಸಿದ ಹರಿಹರ ಶಾಸಕ ರಾಮಪ್ಪ ಬೆಂಬಲಿಗರ ನಡೆಯಿಂದ ಬೇಸತ್ತ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರಲ್ಲಿ, ಒಬ್ಬರಿಗೆ ಕಪಾಳಮೋಕ್ಷ ಮಾಡಿದ್ದರು. ಒಂದು ಹಂತದಲ್ಲಿ ತಮ್ಮ ಆಪ್ತನಿಗೆ ಟಿಕೆಟ್ ಕೊಡಿಸಲು ಆಗಲಿಲ್ಲ ಎನ್ನುವ ಹತಾಶೆಯಲ್ಲಿರುವ ಸಿದ್ದರಾಮಯ್ಯ ಈಗಲೂ ಹೈಕಮಾಂಡ್ ಮಟ್ಟದಲ್ಲಿ ತಮ್ಮವರಿಗಾಗಿ ಲಾಬಿ ಮುಂದುವರಿಸಿದ್ದು, ಶಾಸಕರಾಗಿ ಇವರ ಪ್ರಭಾವ ಕಡಿಮೆ ಆಗಿದೆ ಎಂಬ ಆರೋಪ ಸಹ ಇದೆ. ವಿಧಾನಸಭೆ ಚುನಾವಣೆಗೆ ಹರಿಹರ ಕ್ಷೇತ್ರದಲ್ಲಿ 9 'ಕೈ' ಆಕಾಂಕ್ಷಿಗಳ ಪೈಪೋಟಿ ಇದೆ. ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಬಯಸಿ ಹಾಲಿ ಶಾಸಕ ಎಸ್.ರಾಮಪ್ಪ ಸೇರಿ ಒಟ್ಟು 9 ಮಂದಿ ಅರ್ಜಿ ಸಲ್ಲಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಕೆ.ಎಸ್.ದೇವೇಂದ್ರಪ್ಪ, ಜಿಪಂ ಮಾಜಿ ಸದಸ್ಯ ಎ.ನಾಗೇಂದ್ರ, ಎಚ್.ಮಹೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಬಾಬುಲಾಲ್, ಗೋವಿಂದರೆಡ್ಡಿ, ಉದ್ಯಮಿಗಳಾದ ಶ್ರೀನಿವಾಸ್ ಹಾಗೂ ಕೃಷ್ಣ ಇವರಲ್ಲಿ ಪ್ರಮುಖರು. ಯುವಕರಿಗೆ ಮಣೆ ಹಾಕುವ ನಿಟ್ಟಿನಲ್ಲಿಯೂ ಕಾಂಗ್ರೆಸ್ ಚಿಂತನೆ ನಡೆಸಿದೆ ಎಂಬ ಮಾತಿದೆ.
ನಿರೀಕ್ಷೆ: ಹರಿಹರ ಶಾಸಕ ರಾಮಪ್ಪ ಪ್ರಕಾರ, ನಾನು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಉತ್ತಮ ಹಿಡಿತ ಇದೆ. ಈಗಲೂ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಪಕ್ಷ ನನ್ನನ್ನು ಪರಿಗಣಿಸಲಿದೆ ಎಂಬ ವಿಶ್ವಾಸ ಇದೆ. ಪಕ್ಷದ ರಾಜ್ಯ ನಾಯಕರು ನನ್ನ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಅದಕ್ಕಾಗಿಯೇ ಪ್ರಚಾರ ಕಾರ್ಯ ಸಹ ಆರಂಭಿಸಿದ್ದೇನೆ ಎಂದಿದ್ದಾರೆ.
ಇದನ್ನೂಓದಿ: ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಫೈಟ್: ಟೆಂಗಿನಕಾಯಿ ಸೇರಿ ಆಕಾಂಕ್ಷಿಗಳ ಹಾದಿ ಸುಗಮ