ಬೆಂಗಳೂರು: "ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಿದ ಬಿಜೆಪಿ ಸರ್ಕಾರ ಇದೀಗ ರಾಜ್ಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ರೀತಿಯ ಅಕ್ರಮಕ್ಕೆ ಮುಂದಾಗಿದೆ. ಈ ಕುರಿತು ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೇವೆ" ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೆಂಗಳೂರಿನ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಬಿ.ಆರ್.ಪಾಟೀಲ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ರಾಜ್ಯದ 46ನೇ ವಿಧಾನಸಭಾ ಕ್ಷೇತ್ರವಾಗಿರುವ ಆಳಂದದಲ್ಲಿ ಆನ್‌ಲೈನ್ ಮೂಲಕ 6,670 ಮತದಾರರ ಹೆಸರನ್ನು ಅವರಿಗೆ ಗೊತ್ತಿಲ್ಲದೇ ಮತದಾರರ ಪಟ್ಟಿಯಿಂದ ರದ್ದು ಮಾಡುವಂತೆ ಅರ್ಜಿ ಹಾಕಲಾಗಿದೆ. ಮತದಾರರ ಗಮನಕ್ಕೆ ಬಾರದೇ ಹೆಸರು ಕೈ ಬಿಡುವಂತೆ ಮತ್ತೊಬ್ಬರು ಅರ್ಜಿ ಹಾಕಿದ್ದಾರೆ. ಈ ವಿಚಾರವಾಗಿ ನಮ್ಮ ಬೂತ್ ಏಜೆಂಟ್ಗಳು ಪರಿಶೀಲನೆ ಮಾಡಿದಾಗ ಅರ್ಜಿಯಲ್ಲಿ ತಾನು ಸ್ಥಳೀಯನಲ್ಲ, ನನ್ನ ನಿವಾಸ ಬೇರೆ ರಾಜ್ಯಗಳಲ್ಲಿ ಇದೆ ಎಂದು ಹೇಳಿರುವುದು ಸ್ಪಷ್ಟವಾಗಿದೆ. ಆಮೂಲಕ ಬಹಳ ವ್ಯವಸ್ಥಿತವಾಗಿ ಅಕ್ರಮವಾಗಿ ಮತದಾರರ ಹೆಸರು ಕೈ ಬಿಡಲು ಷಡ್ಯಂತ್ರ ರೂಪಿಸಲಾಗಿದೆ" ಎಂದು ಆರೋಪಿಸಿದರು.
"ಕಾನೂನಿನ ಪ್ರಕಾರ ಒಂದು ಮೊಬೈಲ್ ಸಂಖ್ಯೆಯಿಂದ ಗರಿಷ್ಠ ಐದು ಮಂದಿಯ ಹೆಸರು ಕೈಬಿಡಲು ಅರ್ಜಿ ಹಾಕಬಹುದು. ಆದರೆ ಆಳಂದದಲ್ಲಿ ಒಂದು ಬೂತ್ನಲ್ಲಿ ಒಂದು ಮೊಬೈಲ್ ಸಂಖ್ಯೆಯಲ್ಲಿ 70 ಮತದಾರರ ಹೆಸರು ರದ್ದು ಮಾಡಲು ಅರ್ಜಿ ಹಾಕಲಾಗಿದೆ. ಒಬ್ಬೊಬ್ಬರು 50-70 ಮತದಾರರ ಹೆಸರು ರದ್ದು ಮಾಡಲು ಅರ್ಜಿ ಹಾಕಲು ಹೇಗೆ ಸಾಧ್ಯ?, ಚಿಲುಮೆ ಸಂಸ್ಥೆ ಮೂಲಕದ ಅಕ್ರಮ ಬಯಲಿಗೆ ಬಂದ ನಂತರ ಬಿಜೆಪಿ ತಂತ್ರಜ್ಞಾನ ಬಳಸಿ ಈ ಷಡ್ಯಂತ್ರ ಮಾಡುತ್ತಿದೆ?. ಅಮಿತ್ ಶಾ ಹಾಗೂ ನಡ್ಡಾ ಅವರು ಸರ್ಕಾರದ ಕೆಲಸದ ಪರಿಶೀಲನೆಗಿಂತ ಮತದಾರರ ಹೆಸರು ಕೈಬಿಡುವ ಪರಿಶೀಲನೆ ಮಾಡಲು ಬರುತ್ತಿದ್ದಾರೆಯೇ?, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಹಾಕಲಾಗಿರುವವರಲ್ಲಿ ಬಹುತೇಕ ಕಾಂಗ್ರೆಸ್ ಮತದಾರರಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಯಾರು ಮತ ಹಾಕುತ್ತಾರೆ ಎಂದು ಬೇರೆ ರಾಜ್ಯದವರಿಗೆ ಮಾಹಿತಿ ನೀಡುವವರು ಯಾರು?, ಈ ಮಾಹಿತಿ ಆ ಸ್ಥಳೀಯ ಬೂತ್ನವರಿಗೆ ಗೊತ್ತಿರುತ್ತದೆಯೇ ಹೊರತು ಬೇರೆಯವರಿಂದ ಈ ಕೆಲಸ ಅಸಾಧ್ಯ. ಬಿಜೆಪಿ ಕಾಂಗ್ರೆಸ್ ಮತದಾರರ ಪಟ್ಟಿ ಕಲೆಹಾಕಲು ಕೆಲವರನ್ನು ನೇಮಿಸಿದಂತಿದೆ" ಎಂದರು.
ಇದನ್ನೂ ಓದಿ: ಮತದಾರರ ಪಟ್ಟಿಯಿಂದ 27 ಲಕ್ಷ ಹೆಸರು ತೆಗೆದಿದ್ದು ಹೇಗೆ?: ಡಿ ಕೆ ಶಿವಕುಮಾರ್
"ಬಿಜೆಪಿ ಅವರ ಸಮೀಕ್ಷೆಯಲ್ಲಿ ಅವರಿಗೆ ಸೋಲು ಖಚಿತವಾಗಿದ್ದು ಇದಕ್ಕಾಗಿ ಟಿಪ್ಪು, ರಾಣಿ ಅಬ್ಬಕ್ಕ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಅಮಿತ್ ಶಾ ಅವರಿಗೆ ರಾಣಿ ಅಬ್ಬಕ್ಕ ಯಾರು, ಅವರ ಇತಿಹಾಸವೇನು ಎಂದು ಗೊತ್ತೇ ಇಲ್ಲ. ಬೇಕಾದರೆ ಅವರನ್ನು ಕರೆಯಿಸಿ ಅವರ ಇತಿಹಾಸ ಏನು? ಎಂದು ಹೇಳಲಿ ಅಂತಾ ಸವಾಲು ಹಾಕುತ್ತೇನೆ. ಬಿಜೆಪಿಯ ಈ ಷಡ್ಯಂತ್ರದ ವಿರುದ್ಧ ನಾವು ದೂರಿನ ಜತೆ ದಾಖಲೆಗಳನ್ನು ನೀಡಿದ್ದೇವೆ. ಈ ವಿಚಾರ ಸಂಪೂರ್ಣವಾಗಿ ಪರಿಶೀಲನೆ ಆಗುವವರೆಗೂ ಯತಾಸ್ಥಿತಿ ಇರಬೇಕು. 224 ಕ್ಷೇತ್ರಗಳಲ್ಲಿ ಈ ರೀತಿ ಅಕ್ರಮವಾಗಿ ಮತದಾರರ ಹೆಸರನ್ನು ಕೈಬಿಡುವ ಷಡ್ಯಂತ್ರ ನಡೆದಿಲ್ಲ ಎಂಬ ಖಚಿತತೆಯನ್ನು ಆಯೋಗ ನೀಡಬೇಕು. ಅಲ್ಲದೇ, ಬಿಜೆಪಿ ಈ ಬಗ್ಗೆ ಉತ್ತರ ನೀಡಬೇಕು."
"ಮತದಾರರ ಪಟ್ಟಿ ಅಂತಿಮ ಪರಿಷ್ಕರಣೆ ನಂತರ ಈ ರೀತಿ ಆಗಿದೆ. ಶಿವಾಜಿ ನಗರದಲ್ಲಿ ಮತದಾರರ ಹೆಸರು ಕೈಬಿಟ್ಟಿರುವ ಬಗ್ಗೆ ಮಾಹಿತಿ ಇದ್ದು, ರಿಜ್ವಾನ್ ಅರ್ಷದ್ ಅವರು ದೂರು ನೀಡಿದ್ದಾರೆ. ಆದರೆ, ಇಲ್ಲಿ ಬೇರೆ ಮಾದರಿಯಲ್ಲಿ ಅಕ್ರಮ ಮಾಡಲಾಗಿದೆ. ಇಷ್ಟು ವ್ಯವಸ್ಥಿತವಾಗಿ ಮಾಡುತ್ತಿರುವವರು ಯಾರು? ಎಂಬುದು ಬೆಳಕಿಗೆ ಬರಬೇಕು" ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರು ಡಿಲೀಟ್ ಆಗಿದ್ದು ನಿಜ: ಅರವಿಂದ ಬೆಲ್ಲದ
"ಮುಖ್ಯಮಂತ್ರಿ ಬಿಟ್ ಕಾಯಿನ್ ಮೂಲಕ ಅಕ್ರಮ ಮಾಡಿದರು. ಈಗ ಚುನಾವಣಾ ಪ್ರಕ್ರಿಯೆಯಲ್ಲಿ ಡಿಜಿಟಲ್ ಮೂಲಕ ಅಕ್ರಮ ಮಾಡಲು ಮುಂದಾಗಿದ್ದಾರೆ. ಮತದಾರರ ಹೆಸರನ್ನು ಕೈಬಿಡುವಂತೆ ಅರ್ಜಿ ಹಾಕಿರುವವರಲ್ಲಿ ಬಹುತೇಕರು ಯುಪಿ, ಬಿಹಾರದವರಾಗಿದ್ದಾರೆ. ಬಿಜೆಪಿ ಹೇಳುವ ಯುಪಿ ಮಾದರಿ ಇದೇನಾ?, ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹಾಕಿದರೂ ನೀವು ಮತ್ತೆ ಅಧಿಕಾರಕ್ಕೆ ಬರಲ್ಲ. ನೀವು ಅಮಿತ್ ಶಾ, ನಡ್ಡಾ ಅವರನ್ನು ಎಷ್ಟು ಸಾರಿ ಕರೆಯಿಸಿದರೂ ನಿಮ್ಮನ್ನು ಸೋಲಿಸಲು ಜನ ತೀರ್ಮಾನ ಮಾಡಿದ್ದಾರೆ" ಎಂದರು.
ಬಿ.ಆರ್.ಪಾಟೀಲ್ ಮಾತನಾಡಿ, "ನನ್ನ ಕ್ಷೇತ್ರದಲ್ಲಿ 6 ಸಾವಿರಕ್ಕೂ ಹೆಚ್ಚು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ರದ್ದು ಮಾಡುವಂತೆ ಮನವಿ ಬಂದಿದ್ದು, ಬಹುತೇಕ ಮತದಾರರು ತಾವುಗಳು ಅರ್ಜಿ ಹಾಕಿಲ್ಲ. ಅವರ ಬದಲಿಗೆ ಬೇರೆಯವರು ಹೆಸರು ರದ್ದು ಮಾಡುವಂತೆ ಅರ್ಜಿ ಹಾಕಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ದೂರು ನೀಡಿದ್ದೇವೆ. ಈ ಅರ್ಜಿ ಹಾಕಿರುವವರ ದೂರವಾಣಿ ಸಂಖ್ಯೆಯನ್ನು ಕರೆ ಮಾಡಿದರೆ ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ ಬೇರೆ ರಾಜ್ಯ ಹಾಗೂ ಮಂಡ್ಯ ಇತರೆ ಜಿಲ್ಲೆಯವರು ಮಾತನಾಡುತ್ತಾರೆ. ಈ ವಿಚಾರವನ್ನು ನಾವು ಚುನಾವಣಾ ಆಯೋಗದ ಗಮನಕ್ಕೆ ತಾರದೆ ಇದ್ದಿದ್ದರೆ ಈ ಮತದಾರರ ಹೆಸರು ಪಟ್ಟಿಯಿಂದ ಕೈ ಬಿಡಲಾಗುತ್ತಿತ್ತು. ಮತ ಚಲಾವಣೆ ಮೂಲಭೂತ ಹಕ್ಕು, ಇದನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು" ಎಂದರು.