ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು ತೀವ್ರ ನಷ್ಟಕ್ಕೊಳಗಾಗಿವೆ. ಇವುಗಳ ಪುನಶ್ಚೇತನವಾಗುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ದಕ್ಷಿಣ ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಪೀಣ್ಯ. ಶೇ. 70ರಷ್ಟು ವಹಿವಾಟು ಕುಸಿತದೊಂದಿಗೆ 10 ಸಾವಿರಕ್ಕೂ ಹೆಚ್ಚು ಕಾರ್ಖಾನೆಗಳು (ಐಸಿಯು)ತೀವ್ರ ನಿಗಾ ಘಟಕದಲ್ಲಿವೆ. 12 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೊಳಗಾಗಿ, ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್, ಈ ಹಿಂದೆ ಪಾರ್ಲೆ ಕಂಪನಿ ಪರವಾಗಿ ಕೂಡ ಟ್ವೀಟ್ ಮಾಡಿತ್ತು. ಸಣ್ಣ, ಮಧ್ಯಮ ಗಾತ್ರದ ಕೈಗಾರಿಕೆಗಳ ಬಳಿಕ ದೊಡ್ಡ ಕಂಪನಿಗಳು ಮುಳುಗುತ್ತಿವೆ. ದೇಶಾದ್ಯಂತ ಮನೆ ಮಾತಾಗಿರುವ ಪಾರ್ಲೆ-ಜಿ ಬಿಸ್ಕೆಟ್ ಕಂಪನಿ 10,000 ಉದ್ಯೋಗ ಕಡಿತಕ್ಕೆ ನಿರ್ಧರಿಸಿದೆ. ಉದ್ಯೋಗ ಸೃಷ್ಟಿ ಇರಲಿ, ಇರುವ ಉದ್ಯೋಗಗಳು ನಷ್ಟವಾಗುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೂರ್ಖ ಆರ್ಥಿಕ ನೀತಿಗಳೇ ಕಾರಣ ಎಂದು ನೇರವಾಗಿ ಆಕ್ರೋಶ ವ್ಯಕ್ತಪಡಿಸಿತ್ತು.
ಇದೀಗ ಮತ್ತೊಮ್ಮೆ ಕಾಂಗ್ರೆಸ್ ಟ್ವೀಟ್ ಮೂಲಕ ಕಾಂಗ್ರೆಸ್ ಅಸಮಾಧಾನ ಹೊರಹಾಕಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೈಗಾರಿಕೆಗಳ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದೆ.