ಬೆಂಗಳೂರು: ಇಂತಹದ್ದೇ ಧರ್ಮ, ಜಾತಿಯಲ್ಲಿ ಹುಟ್ಟಬೇಕು ಎಂದು ನಾವು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಅಲ್ಲದೇ ಧರ್ಮವನ್ನು ಬಿಡು ಎಂದು ಯಾವುದೇ ಧರ್ಮ-ಜಾತಿಯಲ್ಲಿ ಹೇಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾದ ಹಿಂದೂ ಜಾಗೃತಿ ಸೇನೆ ಸಂಸ್ಥಾಪಕ ವಿನಯ್ ಗೌಡ ಅವರು ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರವಾಗಿ ಪ್ರಚಾರ ಸಭೆ ಹಮ್ಮಿಕೊಂಡಿದ್ದರು. ಆರ್.ಆರ್. ನಗರದ ಬೆಮಲ್ ಬಡಾವಣೆಯ ಕ್ರೇಜಿ ಪಾರ್ಕ್ ಬಳಿ ಶನಿವಾರ ರಾತ್ರಿ ಏರ್ಪಡಿಸಿದ್ದ ಈ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಸಕಿ ಸೌಮ್ಯಾರೆಡ್ಡಿ, ಬೆಂಗಳೂರು ನಗರ ಉತ್ತರ ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ್ ಮತ್ತಿತರರು ಭಾಗವಹಿಸಿದ್ದರು. ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಗಣ್ಯರು ಅಭ್ಯರ್ಥಿ ಕುಸುಮಾರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಇಂತಹದ್ದೇ ಧರ್ಮದಲ್ಲಿ, ಜಾತಿಯಲ್ಲಿ ಹುಟ್ಟಬೇಕು ಎಂದು ನಾವು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಬ್ರಿಟಿಷರು ನಮ್ಮನ್ನು ಆಳುವ ಸಂದರ್ಭದಲ್ಲಿಯೂ ಸಹ ನಿನ್ನ ಜಾತಿ ಯಾವುದು, ಭಾಷೆ ಯಾವುದು, ಧರ್ಮ ಯಾವುದು ಎಂದು ಕೇಳುತ್ತಿರಲ್ಲ. ಇಂದು ನಮ್ಮ ಧರ್ಮ ಆಚಾರ-ವಿಚಾರ ಭಾಷೆ ಬಿಟ್ಟುಕೊಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದವರು ಹಿಂದೂಗಳಲ್ಲವಾ? ರಾಮಮಂದಿರ ನಿರ್ಮಾಣಕ್ಕೆ ನಾವು ಒಪ್ಪಿಗೆ ಕೊಡುವುದಿಲ್ಲವಾ? ಕೃಷ್ಣನನ್ನು ಪೂಜಿಸುವುದಿಲ್ಲವಾ? ಎಂದು ಪ್ರಶ್ನಿಸಿದ ಡಿಕೆಶಿ, ವಾಲ್ಮೀಕಿ ಜಯಂತಿಯನ್ನು ಕೂಡ ಕಚೇರಿಯಲ್ಲಿ ಆಚರಿಸಿದ್ದೇವೆ. ಸಮಾಜ ಸೇವೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು, ನಾವು ಕೂಡ ಅದೇ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು. ಯಾರು ಸೇವೆ ಮಾಡುತ್ತಾರೆಯೋ ಸಮಾಜ ಅವರನ್ನು ಗುರುತಿಸುತ್ತದೆ. ಪ್ರತಿಯೊಬ್ಬರಿಗೂ ಹತ್ತು - ಹತ್ತು ವೋಟುಗಳನ್ನು ಪರಿವರ್ತಿಸುವ ಶಕ್ತಿ ಇದೆ. ಒಮ್ಮೆ ಕಾಂಗ್ರೆಸ್ಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.