ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಇಂದು ನಡೆಸಿದ ಸಭೆಯಲ್ಲಿ ಸದಸ್ಯರು ಪಕ್ಷದ ಶಾಸಕರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಶಿಸ್ತು ಸಮಿತಿ ಸದಸ್ಯರ ಜೊತೆ ಅಧ್ಯಕ್ಷ ರೆಹಮಾನ್ ಖಾನ್ ಇಂದು ವರ್ಚುವಲ್ ಸಭೆ ನಡೆಸಿದರು. ಈ ಸಂದರ್ಭ ಮುಂದಿನ ಸಿಎಂ ವಿಚಾರವಾಗಿ ಕಾಂಗ್ರೆಸ್ ಶಾಸಕರು ನೀಡುತ್ತಿರುವ ಹೇಳಿಕೆಯ ಬಗ್ಗೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹತ್ತಾರು ಶಾಸಕರು ಪಕ್ಷದ ನಿಯಮವನ್ನು ಮೀರಿ ಹೇಳಿಕೆಗಳನ್ನು ನೀಡಿದ್ದಾರೆ. ಇದು ಶಿಸ್ತು ಮೀರಿದ ನಡವಳಿಕೆಯಾಗಿದೆ. ಪಕ್ಷ ಹಿಂದಿನಿಂದಲೂ ಬೆಳೆಸಿಕೊಂಡು ಬಂದಿರುವ ನಿಯಮ ಹಾಗೂ ಕಟ್ಟುಪಾಡುಗಳನ್ನು ಶಾಸಕರು ಮುರಿದಿದ್ದಾರೆ.
ಪಕ್ಷದ ರಾಜ್ಯ ನಾಯಕರಿಗೆ ನಾವು ನಿಷ್ಠರಾಗಿದ್ದಾರೆ ಎಂದು ತೋರಿಸಿಕೊಳ್ಳುವ ಆತುರದಲ್ಲಿ ನಿಯಮವನ್ನು ಗಾಳಿಗೆ ತೂರಿದ್ದಾರೆ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಇದೆ. ಸಿಎಂ ವಿಚಾರ ಪ್ರಸ್ತಾಪ ಮಾಡಿದ ಎಲ್ಲ ಶಾಸಕರು ಶಿಸ್ತು ಮೀರಿದ್ದಾರೆ. ಶಿಸ್ತಿಗೆ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ. ಪಕ್ಷದ ಸಂಪ್ರದಾಯ ಮುರಿದಿದ್ದಾರೆ. ಚುನಾವಣಾ ಫಲಿತಾಂಶಕ್ಕೂ ಮೊದಲೇ ಸಿಎಂ ಅಭ್ಯರ್ಥಿ ಘೋಷಣೆ ಸಂಪ್ರದಾಯ ಪಕ್ಷದಲ್ಲಿ ಇಲ್ಲ ಎಂದಿರುವ ಸದಸ್ಯರು, ಅತ್ಯಂತ ಪ್ರಮುಖವಾಗಿ ಚಾಮರಾಜಪೇಟೆ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಬಗ್ಗೆ ಹೆಚ್ಚಿನ ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ನಾಯಕರು ಸೂಚನೆ ನೀಡಿದ ನಂತರವೂ ಬಹಿರಂಗ ವೇದಿಕೆಯಲ್ಲಿ ಸಾರ್ವಜನಿಕರ ಮುಂದೆ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಪಕ್ಷದಲ್ಲಿನ ಎಲ್ಲ ವಿವಾದಗಳಿಗೂ ಇವರ ಕಾಣಿಕೆ ಇದೆ. ಇಂತಹವರನ್ನ ಕಂಟ್ರೋಲ್ ಮಾಡದಿದ್ರೆ ಪಕ್ಷಕ್ಕೆ ದೊಡ್ಡಮಟ್ಟದ ಹಾನಿ ಆಗಲಿದೆ. ಶಿಸ್ತು ಉಲ್ಲಂಘಿಸಿದ್ದಕ್ಕೆ ಇವರ ವಿರುದ್ಧ ನೇರವಾಗಿ ನೋಟಿಸ್ ಜಾರಿ ಮಾಡಿ ಎಂದು ಸಲಹೆ ನೀಡಿದ್ದಾರೆ.
ಆದರೆ, ಈ ತಕ್ಷಣ ನೋಟಿಸ್ ನೀಡುವುದು ಸರಿಯಲ್ಲ. ಇನ್ನಷ್ಟು ದಾಖಲೆ ಬೇಕಿದೆ. ಎಲ್ಲವನ್ನು ಸಂಗ್ರಹಿಸಿದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಒಂದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳೋಣ ಎಂದು ಅಧ್ಯಕ್ಷ ರೆಹಮಾನ್ ಖಾನ್ ಸದಸ್ಯರಿಗೆ ಸಲಹೆ ನೀಡಿದ್ದಾರೆ.
ದಾಖಲೆ ಇಲ್ಲದೇ ನೋಟಿಸ್ ನೀಡಿದ್ರೆ ಅದಕ್ಕೆ ಬೆಲೆ ಇರಲ್ಲ. ಇದನ್ನ ನೋಟಿಸ್ಗೆ ಉತ್ತರ ಕೊಡುವಾಗ ಡಿಫೆಂಡ್ ಮಾಡಿಕೊಳ್ಳುತ್ತಾರೆ. ಇನ್ನಷ್ಟು ದಾಖಲೆ ಸಂಗ್ರಹಿಸಿ ಸಭೆ ಸೇರಿ ನೋಟಿಸ್ ಇಶ್ಯೂ ಮಾಡೋಣ ಎಂದಿದ್ದಾರೆ.
ಸುರ್ಜೇವಾಲಾ ಹೇಳಿಕೆ ಬಳಿಕವೂ ಮಾತನಾಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಮುಂದಿನ ಸಭೆಯ ಬಳಿಕ ಎಲ್ಲರಿಗೂ ಕ್ಲಾರಿಫಿಕೇಷನ್ ಕೊಡಿ ಎಂದು ನೋಟಿಸ್ ನೀಡಲು ಶಿಸ್ತು ಸಮಿತಿ ನಿರ್ಧರಿಸಿದೆ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ ಎಂಬ ಮಾಹಿತಿ ಇದೆ.