ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರ ವಜಾಕ್ಕೆ ಒತ್ತಾಯಿಸಿ ನಾಳೆ 4 ಗಂಟೆಗೆ ಕಾಂಗ್ರೆಸ್ ನಾಯಕರ ನಿಯೋಗ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಲಿದೆ.
ಸಚಿವ ಈಶ್ವರಪ್ಪನವರು ರಾಷ್ಟ್ರ ಧ್ವಜ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ರಾಷ್ಟ್ರದ್ರೋಹ ಮಾಡಿದ್ದಾರೆ. ಇದರಿಂದ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಸೂಚನೆ ನೀಡುವಂತೆ ಮನವಿ ಮಾಡಲಿದ್ದಾರೆ.
ಈಶ್ವರಪ್ಪ ರಾಷ್ಟ್ರ ಧ್ವಜ ಹೇಳಿಕೆ ವಿವಾದವನ್ನು ರಾಜ್ಯಪಾಲರ ಅಂಗಳಕ್ಕೆ ಕೊಂಡೊಯ್ಯಲು ಮುಂದಾದ ಕಾಂಗ್ರೆಸ್ ವಿಧಾನಮಂಡಲ ಉಭಯ ಸದನಗಳಲ್ಲಿ ಪ್ರಸ್ತುತ ಆಹೋರಾತ್ರಿ ಧರಣಿ ನಡೆಸುತ್ತಿದ್ದು, ಪ್ರತಿಪಕ್ಷಗಳ ಧರಣಿ ಹಿನ್ನೆಲೆಯಲ್ಲಿ ಸುಗಮ ಕಲಾಪ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ಸರ್ಕಾರ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮಾಡುವ ಚಿಂತನೆ ನಡೆಸಿದೆ.
ಈಶ್ವರಪ್ಪ ವಿರುದ್ಧದ ಹೋರಾಟದ ಮುಂದುವರಿದ ಭಾಗವಾಗಿ ರಾಜಭವನದ ಅಂಗಳಕ್ಕೆ ಹೋರಾಟವನ್ನು ಕೊಂಡೊಯ್ಯಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಅಲ್ಲದೇ ಶಿವಮೊಗ್ಗ ಯುವಕನ ಹತ್ಯೆ ಪ್ರಕರಣವನ್ನೂ ರಾಜಭವನದ ಅಂಗಳಕ್ಕೆ ಕೊಂಡೊಯ್ಯಲಿರುವ ಕೈ ಪಾಳಯ, ಸಚಿವ ಈಶ್ವರಪ್ಪ ಹೇಳಿಕೆ ಹಾಗೂ ಕಾನೂನು ಸುವ್ಯವಸ್ಥೆ ನಿರ್ವಾಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಪಾಲರಿಗೆ ದೂರು ಕೊಡಲು ನಿರ್ಧಾರ ಮಾಡಿದೆ.
ವಿಧಾನಸೌಧದಿಂದ ರಾಜಭವನದ ವರೆಗೆ ಕೈ ನಾಯಕರ ಪಾದಯಾತ್ರೆ ನಡೆಸಿಕೊಂಡು ಸಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ,ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ,ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಭೇಟಿ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.
ಇದನ್ನೂ ಓದಿ: ಹರ್ಷ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನ: ಶಿವಮೊಗ್ಗ ಎಸ್ಪಿ