ಬೆಂಗಳೂರು: ಕಾಂಗ್ರೆಸ್ ಪಕ್ಷದ ಪಾದಯಾತ್ರೆ ನಡೆಯುವ ಮೂರು ದಿನ ನಗರದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆ ನಾಗರಿಕರು, ವಾಹನ ಸವಾರರು ಕಂಗಾಲಾಗುವ ಸ್ಥಿತಿ ನಿರ್ಮಾಣವಾಗಿದೆ.
ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿದ್ದರೂ, ಅಷ್ಟೊಂದು ಗಂಭೀರವಾಗಿ ಸರ್ಕಾರ ಜಾರಿಯಲ್ಲಿಟ್ಟಿಲ್ಲ. ನೆಪಮಾತ್ರಕ್ಕೆ ಕೆಲವರ ಮೇಲೆ ಎಫ್ಐಆರ್ ದಾಖಲಿಸುವ ಕಾರ್ಯ ಆಗುತ್ತಿದೆ. ಕೋವಿಡ್ ಮೂರನೆ ಅತಿ ಉತ್ತುಂಗದಲ್ಲಿರುವಾಗ ಪಾದಯಾತ್ರೆ ಆರಂಭಿಸಿ ಕೊನೆಗೆ ಹೈಕೋರ್ಟ್ ಮಧ್ಯಪ್ರವೇಶ ಹಿನ್ನೆಲೆ ಮೊಟಕುಗೊಳಿಸಿದ್ದ ಪಾದಯಾತ್ರೆಯನ್ನು ಕಾಂಗ್ರೆಸ್ ಇಂದಿನಿಂದ ಮರು ಆರಂಭಿಸಿದೆ.
![congress-conduct-padayathere-](https://etvbharatimages.akamaized.net/etvbharat/prod-images/kn-bng-02-congress-padayatre-script-7208077_27022022212134_2702f_1645977094_30.jpeg)
ರಾಮನಗರ ಜಿಲ್ಲಾ ಕೇಂದ್ರದಿಂದ ಬಿಡದಿವರೆಗೆ ಕಾಂಗ್ರೆಸ್ ಪಾದಯಾತ್ರೆ ನಡೆದಿದ್ದು, ಮೈಸೂರು ರಸ್ತೆಯಲ್ಲಿ ಒಂದು ಮಾರ್ಗದಲ್ಲಿ ಸಾಕಷ್ಟು ವಾಹನ ದಟ್ಟಣೆ ಉಂಟಾಗಿದ್ದು ಗೋಚರಿಸಿತು. ನಾಳೆ ಕೆಂಗೇರಿ ಸಮೀಪದ ಪೂರ್ಣಿಮಾ ಸಮುದಾಯಭವನ ತಲುಪುವ ಕಾಂಗ್ರೆಸ್ , ಮಾ.1 ರಿಂದ ಮೂರು ದಿನ ಬೆಂಗಳೂರು ನಗರದಲ್ಲಿ ಪಾದಯಾತ್ರೆ ನಡೆಸಲಿದೆ.
ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿಯೇ ಪಾದಯಾತ್ರೆ ಸಾಗಿ ಹೋಗಲಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ಸಹ ಪಾದಯಾತ್ರೆಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ತಡೆಯುವ ಯತ್ನ ಮಾಡಿಲ್ಲ. ಹೀಗಿರುವಾಗ, ಮಾರ್ಚ್ ತಿಂಗಳ ಆರಂಭದ ಮೂರು ದಿನ ವಾಹನ ಸವಾರರ ಪಾಲಿಗೆ ನರಕ ದರ್ಶನ ಆಗಲಿದೆ.
![congress-conduct-padayathere-amidst-covid-in-bengaluru](https://etvbharatimages.akamaized.net/etvbharat/prod-images/kn-bng-02-congress-padayatre-script-7208077_27022022212134_2702f_1645977094_452.jpeg)
ಮೊದಲೇ ಬಿಸಿಲಿನ ತಾಪ, ಸಕಾಲಕ್ಕೆ ಕಚೇರಿ ತಲುಪುವ ಧಾವಂತ. ಅನಾರೋಗ್ಯ ಪೀಡಿತರನ್ನು ಕರೆದೊಯ್ಯುವ ಆಂಬ್ಯುಲೆನ್ಸ್, ಶಾಲೆ, ಕಾಲೇಜಿಗೆ ತೆರಳುವವರು ಸಾಕಷ್ಟು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ವಾರದ ದಿನದಲ್ಲಿಯೇ ಜನನಿಬಿಡ ರಸ್ತೆಯಲ್ಲಿ ಕಾಂಗ್ರೆಸ್ ಪಾದಯಾತ್ರೆ ನಡೆಸಲಿದ್ದು, ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗಿಯಾಗಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.
ಮೊದಲ ದಿನ ಅಂದರೆ ಮಾ.1 ರಂದು ಬೆಂಗಳೂರಿನ ಕೆಂಗೇರಿ ಪೂರ್ಣಿಮಾ ಸಮುದಾಯ ಭವನದಿಂದ ಬಿಟಿಎಂ ಲೇಔಟ್ನ ಅದ್ವೈತ ಪೆಟ್ರೋಲ್ ಬಂಕ್ ವರೆಗೆ ಪಾದಯಾತ್ರೆ ನಡೆಯಲಿದೆ. ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಪಾದಯಾತ್ರೆ ಸಾಗಲಿದ್ದು, ಜನ ಸೇರದೇ ಇರಲು ಸಾಧ್ಯವೇ? ಇನ್ನು ಮಾರನೇ ದಿನ ಬಿಟಿಎಂ ಬಡಾವಣೆಯಿಂದ ನೇರವಾಗಿ ಕಾಂಗ್ರೆಸ್ ಪಾದಯಾತ್ರೆ ಬೆಂಗಳೂರಿನ ಇನ್ನೊಂದು ಭಾಗದ ಅರಮನೆ ಮೈದಾನ ತಲುಪಲಿದೆ.
ಇನ್ನು ಮಾ.3 ರಂದು ಅರಮನೆ ಮೈದಾನದಿಂದ ಹೊರಡುವ ಪಾದಯಾತ್ರೆ ನೇರವಾಗಿ ಬಸವನಗುಡಿಯ ಅರಮನೆ ಮೈದಾನ ತಲುಪಲಿದೆ. ಅಲ್ಲಿ ಬೃಹತ್ ಸಮಾರೋಪ ಸಮಾರಂಭ ನಡೆಯಲಿದೆ. ವಿಶೇಷ ಅಂದರೆ ಇದ್ಯಾವ ಚಟುವಟಿಕೆಗೂ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ, ಪೊಲೀಸ್ ಇಲಾಖೆಯಿಂದ ಪರವಾನಗಿ ಸಿಕ್ಕಿಲ್ಲ. ಸಂಪೂರ್ಣ ಪಾದಯಾತ್ರೆ, ಸಮಾರಂಭ ಎಲ್ಲವೂ ನಿಯಮ, ನಿರ್ಬಂಧ ಮೀರಿಯೇ ನಡೆಯುತ್ತಿರುವುದಾಗಿದೆ. ಇದಕ್ಕೆ ಸರ್ಕಾರ ತಡೆಯೊಡ್ಡುವುದಾ? ಅನ್ನುವುದನ್ನು ಕಾದುನೋಡಬೇಕಿದೆ.
ಓದಿ: ಸಿದ್ದರಾಮಯ್ಯ, ಡಿಕೆಶಿ ಅತ್ತೆ-ಸೊಸೆ ಇದ್ದಂಗೆ : ಸಚಿವ ಈಶ್ವರಪ್ಪ ವ್ಯಂಗ್ಯ