ಬೆಂಗಳೂರು : ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿರುವ ಹೇಳಿಕೆ ಖಂಡಿಸಿ ಕಾಂಗ್ರೆಸ್ನಿಂದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೃಹ ಸಚಿವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಠಾಣೆಗೆ ಕೆಪಿಸಿಸಿ ವಕ್ತಾರ ಮನೋಹರ್ ದೂರು ನೀಡಿದ್ದಾರೆ. 'ಕಾಂಗ್ರೆಸ್ನವರು ನನ್ನ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾರೆ ಎಂಬ ಗೃಹ ಸಚಿವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅವರ ಮೇಲೆ ಯಾರು ಅತ್ಯಾಚಾರ ನಡೆಸಿದ್ದಾರೆ ಎಂಬುದನ್ನು ಕೂಡಲೇ ತನಿಖೆ ನಡೆಸಿ ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಗೃಹ ಸಚಿವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಸತ್ಯಾಂಶ ರಾಜ್ಯದ ಜನತೆಯ ಮುಂದೆ ಬಹಿರಂಗಪಡಿಸಬೇಕು' ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಪ್ರಕರಣ ಸಂಬಂಧ ಇಂದು ಕಾಂಗ್ರೆಸ್ನಿಂದ ಗೃಹ ಸಚಿವರ ರಾಜೀನಾಮೆ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ಆರಗ ಜ್ಞಾನೇಂದ್ರ, ಅತ್ಯಾಚಾರ ಆಗಿರೋದು ಮೈಸೂರಿನಲ್ಲಿ. ಆದರೆ ಕಾಂಗ್ರೆಸ್ನವರು ನನ್ನನ್ನೇ ರೇಪ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ವಿಚಾರದಲ್ಲಿ ಹೀಗೆ ಮಾಡುವುದಕ್ಕೆ ಹೋಗಬಾರದು. ಈ ಪ್ರಕರಣದಲ್ಲೂ ರಾಜಕೀಯ ಮಾಡಲು ಹೋಗಬಾರದು ಎಂದು ಹೇಳಿದ್ದರು.
ಇದನ್ನೂ ಓದಿ: Mysore Gangrape Case: ನಿರ್ಜನ ಪ್ರದೇಶಕ್ಕೆ ವಿದ್ಯಾರ್ಥಿನಿ ಹೋಗಬಾರದಿತ್ತು ಅಂತ ಹೇಳಿಲ್ಲ ಎಂದ ಗೃಹ ಸಚಿವ ಜ್ಞಾನೇಂದ್ರ!