ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಶಾಕ್ ಕೊಟ್ಟಿದೆ. ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ನೀಡುತ್ತಿದ್ದಂತೆ ದೋಸ್ತಿಗಳಲ್ಲಿ ಸಂಚಲನ ಶುರುವಾಗಿದ್ದು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜತೆ ಕೆಲ ಕಾಂಗ್ರೆಸ್ ನಾಯಕರಲ್ಲೂ ಆತಂಕ ಮೂಡಿದೆ.
ಯಾರಿಗೆ ಆತಂಕ?
ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್, ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗೆ ಸಿಬಿಐ ತನಿಖೆ ಬಿಸಿ ತಟ್ಟಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಅಂದಿನ ಗೃಹ ಸಚಿವ ಎಂ.ಬಿ.ಪಾಟೀಲ್ ಗಮನಕ್ಕೆ ಬಾರದೇ ಫೋನ್ ಕದ್ದಾಲಿಕೆ ಆಯ್ತಾ? ಅಥವಾ ಅವರೂ ಈ ಕಾರ್ಯಕ್ಕೆ ಸಾಥ್ ಕೊಟ್ಟರಾ ಎನ್ನುವ ಅನುಮಾನ ಕಾಡಿದೆ. ಈ ವಿಚಾರ ಅಂದಿನ ಡಿಸಿಎಂ ಜಿ.ಪರಮೇಶ್ವರ್ಗೆ ಗೊತ್ತಿತ್ತು ಎನ್ನುವ ಬಲವಾದ ಮಾತುಗಳೂ ಕೇಳಿ ಬರುತ್ತಿವೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗೂ ಕದ್ದಾಲಿಕೆ ವಿಚಾರ ಗೊತ್ತಿತ್ತಾ? ಎನ್ನುವ ಗುಮಾನಿ ಎದ್ದಿದೆ. ಹೆಚ್ಡಿಕೆಗೆ ಅಂದು ಬಹಳ ಆಪ್ತರಾಗಿದ್ದ ಡಿಕೆಶಿ ಹಾಗೂ ಪರಮೇಶ್ವರ್ ಪ್ರಕರಣದಲ್ಲಿ ಭಾಗಿಯಾಗಿದ್ದರಾ ಅನ್ನುವ ಪ್ರಶ್ನೆಯೂ ಎದ್ದಿದೆ. ಕಾಂಗ್ರೆಸ್ ನಾಯಕರು ಈ ಇಬ್ಬರೂ ನಾಯಕರ ನಡೆಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎನ್ನಲಾಗುತ್ತಿದೆ.