ಬೆಂಗಳೂರು: ನನ್ನ ನಡವಳಿಕೆ ಹಾಗೂ ಒಳ್ಳೆಯತನವನ್ನು ಮೆಚ್ಚಿ ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನ ಸ್ಥಳೀಯ ಮುಖಂಡರು ಬಿಜೆಪಿಗೆ ಬರುತ್ತಿದ್ದಾರೆ ಎಂದು ಇತರ ಪಕ್ಷಗಳ ನಾಯಕರ ಬಿಜೆಪಿ ಸೇರ್ಪಡೆಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದರು.
ವೈಯಾಲಿಕಾವಲ್ ನಿವಾಸದಲ್ಲಿ ಸುದ್ದಿಗಾರರಿಂದಿಗೆ ಮಾತನಾಡಿದ ಅವರು, ನನ್ನ ಮೇಲಿನ ನಂಬಿಕೆಯಿಂದ ಕಾರ್ಪೋರೇಟರ್ಗಳು, ಮಾಜಿ ಕಾರ್ಪೋರೇಟರ್ಗಳು ಸೇರಿದಂತೆ ಸಾಕಷ್ಟು ಮಂದಿ ಮುಖಂಡರು ಬಿಜೆಪಿಗೆ ಬರುತ್ತಿದ್ದಾರೆ. ಅವರಲ್ಲರೂ ಪಕ್ಷದ ಸಿದ್ಧಾಂತವನ್ನು ಒಪ್ಪಿಯೇ ಬಿಜೆಪಿಗೆ ಬರುತ್ತಿದ್ದಾರೆ ಎಂದರು. ಇತರ ಪಕ್ಷಗಳಿಂದ ಮುಖಂಡರು ಬಂದಾಗ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುವುದು ಸಹಜ. ಅದೇ ರೀತಿ ಆರ್ಆರ್ ನಗರದಲ್ಲಿ ನಮ್ಮ ಪಕ್ಷಕ್ಕೆ ಸೇರಿದ ಜೆಡಿಎಸ್ ಮುಖಂಡ ರಾಮಚಂದ್ರ ಹಾಗೂ ಅಲ್ಲಿನ ಬಿಜೆಪಿ ಪಾಲಿಕೆ ಸದಸ್ಯರ ನಡುವೆ ಸಮಸ್ಯೆ ಆಗಿದೆ. ಅವರಿಬ್ಬರನ್ನು ಕೂರಿಸಿಕೊಂಡು ಸಭೆ ನಡೆಸಿದ್ದೇನೆ. ಎಲ್ಲವನ್ನೂ ಪರಿಹರಿಸಿ ಅವರನ್ನು ಒಂದು ಮಾಡುವ ಕೆಲಸ ಮಾಡಿದ್ದೇನೆ ಎಂದರು.
ಮತದಾರರು ಕೈ ಬಿಡಲ್ಲ: ಈ ಬಾರಿಯ ಉಪ ಚುನಾವಣೆಯಲ್ಲಿ ಆರ್.ಆರ್.ನಗರ ಕ್ಷೇತ್ರದ ಜನ ನನ್ನ ಕೈ ಬಿಡುವುದಿಲ್ಲ. ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸಗಳೇ ನನ್ನ ಕೈಹಿಡಿಯಲಿವೆ. ಒಂದು ವೇಳೆ ಇಲ್ಲಿನ ಜನ ನನ್ನ ಕೈ ಬಿಡುವುದಿದ್ದರೆ 2018ರಲ್ಲಿಯೇ ಬಿಡುತ್ತಿದ್ದರು. ಆದರೆ ಒಳ್ಳೆಯ ಕೆಲಸಗಾರ, ಕ್ಷೇತ್ರಕ್ಕೆ ಕೆಲಸ ಮಾಡಲು ಸೂಕ್ತ ವ್ಯಕ್ತಿ ಎಂದು ಜನತೆ ತೀರ್ಮಾನ ಮಾಡಿ ಗೆಲ್ಲಿಸಿದ್ದರು. ಈಗಲೂ ಗೆಲ್ಲಿಸಲಿದ್ದಾರೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ಬಗ್ಗೆ ಮಾತಾಡಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಅವರು ಬಹಳ ಹಿರಿಯರು, ದೊಡ್ಡ ವ್ಯಕ್ತಿ, ನಾನು ತುಂಬಾ ಚಿಕ್ಕವನು, ನನ್ನ ಬಗ್ಗೆ ಅವರು ಏನೇ ಹೇಳಿದರೂ ನಾನು ದೊಡ್ಡವರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದರು.
ಪ್ರಚಾರ ಯೋಜನೆ ಕುರಿತು ಸಭೆ: ನಾಳೆ ಸಂಪೂರ್ಣವಾಗಿ ಎಲ್ಲಾ ಮುಖಂಡರ ಸಭೆ ಇದೆ. ಸಚಿವರಾದ ಗೋಪಾಲಯ್ಯ, ಸೋಮಣ್ಣ, ಅಶೋಕ್ ಶಾಸಕ ಅರವಿಂದ ಲಿಂಬಾವಳಿ ಎಲ್ಲರೂ ಸೇರಿ ಸಭೆ ನಡೆಸಲಿದ್ದೇವೆ. ಚುನಾವಣಾ ಪ್ರಚಾರಕ್ಕೆ ಏನೇನು ಮಾಡಬೇಕೆಂದು ನಿರ್ಧರಿಸಲಿದ್ದೇವೆ. ನಾಮಪತ್ರ ವಾಪಸ್ಗೆ ಇಂದು ಕಡೆಯ ದಿನವಾಗಿದೆ. ನಂತರ ನಮಗೆ ಕ್ರಮ ಸಂಖ್ಯೆ ಸಿಗಲಿದೆ. ನಂಬರ್ ಬರುತ್ತಿದ್ದಂತೆ ನಾವು ಪ್ರಚಾರ ಕಾರ್ಯ ಆರಂಭಿಸಲಿದ್ದೇವೆ ಎಂದರು.