ಬೆಂಗಳೂರು/ಹಾಸನ/ಚಿತ್ರದುರ್ಗ: ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಕೆಆರ್ಪುರ ಕ್ಷೇತ್ರದ ಕಾರ್ಯಕರ್ತರು ಹಾಗೂ ಜೈ ಭುವನೇಶ್ವರಿ ಒಕ್ಕಲಿಗ ಸಂಘದ ಕಾರ್ಯಕರ್ತರು, ಬೊಮ್ಮನಹಳ್ಳಿ ಆನೇಕಲ್ ಸುತ್ತಲು ಹಾಗೂ ಯಾದಗಿರಿ, ಹಾಸನ,ಚಿತ್ರದುರ್ಗ ಸೇರಿ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಟೈರ್ಗಳಿಗೆ ಬೆಂಕಿಹಚ್ಚಿ, ರಸ್ತೆತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೆಆರ್ ಪುರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆ ಕಚೇರಿಯ ಎದುರು ಪ್ರತಿಭಟನೆ ನಡೆಸಿ, ರಾಷ್ಟ್ರೀಯ ಹೆದ್ದಾರಿ 207 ಅನ್ನು ತಡೆದು ಜಾರಿ ನಿರ್ದೇಶನಾಲಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಇನ್ನೂ ಬೆಂಗಳೂರು ಪೂರ್ವತಾಲೂಕಿನ ಜೈಭುವನೇಶ್ವರಿ ಒಕ್ಕಲಿಗ ಸಂಘದ ಕಾರ್ಯಕರ್ತರು ಹೊರವರ್ತುಲ ರಸ್ತೆಯ ಬಿ.ನಾರಾಯಣಪುರದಿಂದ ಲೌರಿ ಮೆಮೋರಿಯಲ್ ಶಾಲೆಯ ಜಂಕ್ಷನ್ವರೆಗೂ ಜಾಥಾ ನಡೆಸುವ ಮುಖಾಂತರ ಪ್ರತಿಭಟನೆ ನಡೆಸಿದರು.
ಬೊಮ್ಮನಹಳ್ಳಿ-ಬೇಗೂರು ರಸ್ತೆಯಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಚರ್ಚ್ ನಿಲ್ದಾಣದಿಂದ ಬೇಗೂರು ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇನ್ನೂ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರೀಗೌಡ ಹುಲಕಲ್ ನೇತೃತ್ವದಲ್ಲಿ ಪ್ರತಿಭಟನೆ ಪ್ರಾರಂಭಿಸಿದ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಸುಭಾಷ ವೃತ್ತದವರೆಗೆ ಪ್ರತಿಭಟನಾ ಱಲಿ ನಡೆಸಿದರು. ಸ್ವಾಯತ್ತ ಸಂಸ್ಥೆಯಾದ ಜಾರಿ ನಿರ್ದೇಶನಾಲಯ ಇಲಾಖೆಯು ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಜಾಪ್ರಭುತ್ವದ ವಿರೋಧಿ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಟೀಕಿಸಿದರು.
ಕಾಂಗ್ರೆಸ್ ಪ್ರತಿಭಟನೆಗೆ ಜೆಡಿಎಸ್ ಸಹ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ವಿಚಾರಣೆಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದರೂ ವಿಳಂಬವಾಗಿ ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ನೋಡಿದರೆ ಇದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಆರೋಪಿಸಿದರು.