ಬೆಂಗಳೂರು : ಪಡಿತರ ಚೀಟಿಗಳ ವಿತರಣೆ ಮತ್ತು ನ್ಯಾಯಬೆಲೆ ಅಂಗಡಿಗಳ ಹಂಚಿಕೆ ವ್ಯವಸ್ಥೆಯಲ್ಲಿನ ಗೊಂದಲಗಳಿಗೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಅಂಗಡಿ ಹಂಚಿಕೆ ಕುರಿತು ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲನೆ ಮಾಡಿ ಸೂಕ್ತವಾದ ಕೈಗೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಿಗೆ ನಿದೇಶಿಸಿದೆ.
ರಾಜಾಜಿನಗರ ಶಾಸ್ತ ಮಹಿಳಾ ಸಂಘ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ದೊಡ್ಡ ಬಿದರಕಲ್ಲು ನಿವಾಸಿಯಾಗಿರುವ ಬಿ.ಮಂಜುನಾಥ್ ಅವರಿಗೆ ವಿಕಲಚೇತನರ ಕೋಟಾದಲ್ಲಿ ಹಂಚಿಕೆಯಾಗಿದ್ದ ನ್ಯಾಯಬೆಲೆ ಅಂಗಡಿಯನ್ನು ಮೇಲ್ಮನವಿ ಪ್ರಾಧಿಕಾರದ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಮಂಜುನಾಥ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪಡಿತರ ಚೀಟಿಗಳ ವಿತರಣೆ ಮತ್ತು ನ್ಯಾಯಬೆಲೆ ಅಂಗಡಿಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಗೊಂದಲಗಳಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ.
ಅಲ್ಲದೆ, ನಗರ ಪ್ರದೇಶದಲ್ಲಿ 800 ಮತ್ತು ಗ್ರಾಮೀಣ ಭಾಗಗಳಲ್ಲಿ 500 ಚೀಟಿಗಳಿಗೊಂದರಂತೆ ನ್ಯಾಯಬೆಲೆ ಅಂಗಡಿಗೆ ಅನುಮತಿ ನೀಡಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ. ಆದರೆ, ಪಡಿತರ ಚೀಟಿಗಳು ಮತ್ತು ನ್ಯಾಯಬೆಲೆ ಅಂಗಡಿಗಳ ಹಂಚಿಕೆ ಮಾಡುವಲ್ಲಿ ತಾರತಮ್ಯ ಮತ್ತು ವಿವೇಚನಾ ರಹಿತ ನಿರ್ಧಾರಗಳಿಂದ ಈ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ. ನಿಯಮಗಳನ್ನು ಪಾಲಿಸಿ ಈ ಹಂಚಿಕೆ ಮಾಡಬೇಕು ಎಂದು ನ್ಯಾಯಪಪೀಠ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಜೊತೆಗೆ, ಅಗತ್ಯವಾದ ದಾಖಲೆಗಳನ್ನು ಪರಿಶೀಲನೆಗೊಳಪಡಿಸಿದ ಬಳಿಕವೇ ಅತ್ಯಂತ ಜಾಗರೂಕತೆಯಿಂದ ಅಂಗಡಿಗಳನ್ನು ಮಂಜೂರು ಮಾಡುವಂತೆ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿರುವ ಅಂಶವನ್ನು ಉಲ್ಲೇಖಿಸಿರುವ ಹೈಕೋರ್ಟ್, ಈ ರೀತಿಯ ಎಚ್ಚರಿಕೆ ಆದೇಶಗಳು ಕೇವಲ ದಾಖಲೆಗಳಲ್ಲಿ ಮಾತ್ರ ಉಳಿದಿದೆ. ಪ್ರತಿ ಸಂದರ್ಭದಲ್ಲಿ ಪಡಿತರ ಚೀಟಿಗಳ ಹಂಚಿಕೆ ಬಳಿಕವೂ ನ್ಯಾಯಾಲಯದ ಮೆಟ್ಟಿಲೇರುತ್ತವೆ ಎಂದು ಬೇಸರ ವ್ಯಕ್ತಪಡಿಸಿದೆ.
ಒನ್ ನೇಷನ್, ಒನ್ ರೇಷನ್ ಕಾರ್ಡ್ ಪದ್ಧತಿ ಜಾರಿಯಾದ ಬಳಿಕ ಕಾರ್ಡ್ದಾರರು ಯಾವ ಪಡಿತರ ಅಂಗಡಿಯಲ್ಲಾದರೂ ಪಡಿತವನ್ನು ಪಡೆದುಕೊಳ್ಳಬಹುದು ಎಂದು ಸರ್ಕಾರದ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡ ನ್ಯಾಯಾಲಯ, ಇದನ್ನು ಜಾರಿ ಮಾಡುವುದಕ್ಕಾಗಿ ಸರ್ಕಾರ ಒಬ್ಬರಿಂದ ಪಡಿತರ ಚೀಟಿ ಹಿಂಪಡೆದು ಮತ್ತೊಬ್ಬರಿಗೆ ನೀಡುವುದಕ್ಕೆ ಮುಂದಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿತು. ಜೊತೆಗೆ, ಪ್ರಕರಣವನ್ನು ಪುನರ್ ಪರಿಶೀಲನೆಗಾಗಿ ಮತ್ತೆ ಮೇಲ್ಮನವಿ ಪ್ರಾಧಿಕಾರಕ್ಕೆ ಹಿಂದಿರುಗಿಸಿದೆ.
ಇದನ್ನೂ ಓದಿ:ಸಿ ಟಿ ರವಿ ವಿರುದ್ಧ ನಾವು ಪ್ರತಿಭಟನೆ ಆರಂಭಿಸಿದರೆ ಮನೆಯಿಂದ ಹೊರ ಬರಲೂ ಸಾಧ್ಯವಾಗಲ್ಲ: ಎಂ ಬಿ ಪಾಟೀಲ್