ಬೆಂಗಳೂರು: ದೆಹಲಿ ಬದಲು ಬೆಂಗಳೂರು ಅಥವಾ ಬೆಳಗಾವಿಯಲ್ಲಿಯೇ ತಮ್ಮ ವಿಚಾರಣೆ ನಡೆಸುವಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದಾರೆ.
ಡಿಕೆಶಿ ಇಡಿ ವಿಚಾರಣೆ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಣೆ ಸಂಬಂಧ ನಾಳೆ 19 ರಂದು ದೆಹಲಿಯ ಜಾರಿ ನಿರ್ದೇಶನಾಲಯ ಕಚೇರಿಗೆ ವಿಚಾರಣೆಗಾಗಿ ಆಗಮಿಸುವಂತೆ ಹೆಬ್ಬಾಳ್ಕರ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಮಹಿಳೆಯಾದ ತಮಗೆ ದೆಹಲಿ ಕಚೇರಿಯಲ್ಲಿ ನಡೆಸುವ ವಿಚಾರಣೆಯಿಂದ ವಿನಾಯತಿ ನೀಡಬೇಕು. ಬೆಂಗಳೂರು ಅಥವಾ ಬೆಳಗಾವಿಯಲ್ಲಿ ತಮ್ಮ ವಿಚಾರಣೆ ನಡೆಸಬೇಕು ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜಾರಿ ನಿರ್ದೇಶನಾಲಯವನ್ನು ಕೋರಿದ್ದಾರೆ.
ಇಡಿ ಈ ಹಿಂದೆಯೇ ಸೆ.14 ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿತ್ತು. ಆದರೆ, 14 ರಂದು ವಿಚಾರಣೆಗೆ ಬರಲು ಆಗಲ್ಲ ಎಂದಿದ್ದಕ್ಕೆ 19 ರಂದು ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯ ಮತ್ತೊಂದು ಸಮನ್ಸ್ ನೀಡಿದೆ. ಇಂದು ಮಧ್ಯಾಹ್ನದ ವೇಳೆಗೆ ತಮ್ಮ ಮನವಿ ಬಗ್ಗೆ ಇಡಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡಿ ಕೆ ಶಿವಕುಮಾರ್ ಅವರ ಜತೆ ಲಕ್ಷ್ಮಿ ಹೆಬ್ಬಾಳ್ಕರ್ ಅಥವಾ ಅವರ ಸಂಬಂಧಿಕರು ಯಾವುದಾದರೂ ವ್ಯವಾಹರಿಕ ಸಂಬಂಧ ಹೊಂದಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಲು ಇಡಿ ಸಮನ್ಸ್ ನೀಡಿದೆ ಎಂದು ಹೇಳಲಾಗುತ್ತಿದೆ.