ಬೆಂಗಳೂರು: ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿಗೆ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಖಂಡಿಸಿ ಕಾಂಗ್ರೆಸ್ ಕೈಗೊಂಡಿದ್ದ ಪ್ರತಿಭಟನೆ ವೇಳೆ ಕಾರುಗಳಿಗೆ ಬೆಂಕಿಯಿಟ್ಟ ಪ್ರಕರಣದ ಐವರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ದೊರೆತಿದೆ. ಶಾಂತಿನಗರದ ಇ.ಡಿ (ಜಾರಿ ನಿರ್ದೇಶನಾಲಯ) ಕಚೇರಿ ಬಳಿ ಕಾರಿಗೆ ಬೆಂಕಿಯಿಟ್ಟ ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು 5 ಮಂದಿಯನ್ನು ಬಂಧಿಸಿದ್ದರು.
ಮಂಜುನಾಥ್, ಖುಷ್ವಂತ್, ಅಗಸ್ಟಿನ್, ದಕ್ಷಿಣಾಮೂರ್ತಿ ಹಾಗೂ ರಿಯಾನ್ ರಾಜು ಎಂಬುವರನ್ನು ಬಂಧಿಸಲಾಗಿತ್ತು. ಈ ಆರೋಪಿಗಳಿಗೆ ಮುಂದಿನ 4 ದಿನ ಠಾಣಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಷರತ್ತು ವಿಧಿಸಿರುವ 6ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ವ್ಯಕ್ತಿ ಬಂಧನ: ಮತ್ತೊಂದೆಡೆ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ಕಾರಿಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಶಾಂತಪ್ಪ ಎಂಬ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಬೈಕಿನಲ್ಲಿ ಇಬ್ಬರು ಯುವಕರ ಜೊತೆ ಬಂದಿದ್ದ ಆರೋಪಿ ಪೆಟ್ರೋಲ್ ಸುರಿದು ಹಳೇ ಕಾರಿಗೆ ಬೆಂಕಿ ಹಚ್ಚಿದ್ದ. ಸದ್ಯ ಶೇಷಾದ್ರಿಪುರಂ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಸಹೋದರರಿಂದಲೇ ಅಪ್ರಾಪ್ತೆ ಗರ್ಭಿಣಿ.. ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ