ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದು ವಿದ್ಯಾರ್ಥಿಗಳ ಜೀವಕ್ಕೆ ಮಾರಕವಾಗಲಿದೆ ಎಂದು ಆರೋಪಿಸಿ ಸಚಿವರ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದೆ.
ಸಚಿವ ಸುರೇಶ್ ಕುಮಾರ್ ವಿರುದ್ಧ ಪರಿಷತ್ ಸಹ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಆದರ್ಶ್ ಅಯ್ಯರ್ ಎಂಬುವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಲಾಕ್ಡೌನ್ ಸಡಿಲಿಕೆ ಬಳಿಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನದಿಂದ ಅಧಿಕವಾಗುತ್ತಿದೆ. ಸೋಂಕಿನಿಂದ ಮರಣದ ಸಂಖ್ಯೆಯೂ ನಿಧಾನವಾಗಿ ಏರಿಕೆಯಾಗುತ್ತಿದೆ. ಈ ನಡುವೆಯೂ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ತೀರ್ಮಾನಿಸಿರುವುದು ಲಕ್ಷಾಂತರ ವಿದ್ಯಾರ್ಥಿಗಳ ಜೀವಗಳೊಂದಿಗೆ ಆಟವಾಡಿದಂತೆ. ಹೀಗಾಗಿ ಸಚಿವರ ವಿರುದ್ಧ ಐಪಿಸಿ ಸೆಕ್ಷನ್ 107, 304( ಉದ್ದೇಶಿತವಲ್ಲದ ಕೊಲೆ) ಪ್ರಕರಣ ದಾಖಲಿಸಿಕೊಳ್ಳುವಂತೆ ಹಲಸೂರು ಗೇಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಒಂದೆರಡು ದಿನಗಳಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಬೇಕು. ಎಫ್ಐಆರ್ ದಾಖಲಾಗದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಆದರ್ಶ್ ಮಾಹಿತಿ ನೀಡಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಬೇಕು ಅಥವಾ ರದ್ದು ಮಾಡಬೇಕಾ ? ಎಂಬ ನಿರ್ಧಾರ ಕೈಗೊಳ್ಳಬೇಕಿರುವುದು ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ. ನಿಯಮವನ್ನು ಗಾಳಿಗೆ ತೂರಿ ಸಚಿವರು ಮೇ 18 ರಂದು ಸಭೆ ನಡೆಸಿ ಪರೀಕ್ಷೆ ನಡೆಸಬೇಕು ಎಂದು ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಈಗಾಗಲೇ ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು ಎಂದು ಅವರು ಹೇಳಿದರು.