ಬೆಂಗಳೂರು: ನರಕ ಚತುರ್ದಶಿ ದೀಪಾವಳಿ ಎರಡನೇ ದಿನ ಬರುತ್ತದೆ. ಇದನ್ನು ಪ್ರತಿವರ್ಷ ಕಾರ್ತಿಕ ಮಾಸದ 14ನೇ ದಿನಂದು ಆಚರಿಸಲಾಗುತ್ತದೆ. ಈ ದಿನ ಶ್ರೀಕೃಷ್ಣ ಹಾಗೂ ಸತ್ಯಭಾಮಾ ಇಬ್ಬರು ಸೇರಿ ನರಕಾಸುರ ಎಂಬ ರಾಕ್ಷಸನನ್ನು ಕೊಂದರು. ಅದಕ್ಕಾಗಿ ನರಕ ಚತುರ್ದಶಿ ಆಚರಣೆಗೆ ಬಂತು ಎಂಬ ನಂಬಿಕೆ ಇದೆ.
ನರಕ ಚತುರ್ದಶಿಯನ್ನು ಮನುಷ್ಯನಲ್ಲಿರುವ ಆಲಸ್ಯವನ್ನು ಹಾಗೂ ಮನುಷ್ಯನ ಜೀವನವನ್ನು ನರಕ ಮಾಡುವ, ಕೆಟ್ಟತನವನ್ನು ಹೋಗಲಾಡಿಸಲು ದೀಪಾವಳಿ ಹಬ್ಬದ ಎರಡನೇ ದಿನವಾಗಿ ಆಚರಿಸುತ್ತಾರೆ. ಹಿಂದೂ ಧರ್ಮದಲ್ಲಿ ನರಕ ಚತುರ್ದಶಿಗೆ ವಿಶೇಷ ಮಹತ್ವವಿದೆ. ದೀಪಾವಳಿ ಹಬ್ಬವನ್ನು ಪ್ರತಿ ವರ್ಷ ಆಶ್ವಯುಜ ಮಾಸದ, ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಯಮರಾಜನಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ನರಕ ಚತುರ್ದಶಿಯ ದಿನದಂದು ಸ್ನಾನ, ದಾನ ಮತ್ತು ದೀಪಗಳನ್ನು ದಾನ ಮಾಡುವುದು ಸಹ ವಿಶೇಷ ಮಹತ್ವ ಪಡೆದುಕೊಂಡಿದೆ. ನರಕಚತುರ್ದಶಿ ಹಬ್ಬವನ್ನು ಅಭ್ಯಂಗಸ್ನಾನ ಮುಹೂರ್ತ ನವೆಂವರ್ 12 ರಂದು ಬೆಳಗಿನ ಜಾವ 5.28 ರಿಂದ 6.41 ರವರೆಗೆ ಹಾಗೂ ದೀಪದಾನ ಸಮಯ ಸಂಜೆ 5.29 ರಿಂದ ರಾತ್ರಿ 8.7 ರವರೆಗೆ ಇರುತ್ತದೆ. ಈ ರೀತಿ ಅಭ್ಯಂಗ ಸ್ನಾನ ಮಾಡುವುದರಿಂದ ಮೈಯಲ್ಲಿರುವ ಆಲಸಿತನ ಹಾಗೂ ಮನಸ್ಸಿಲ್ಲಿರುವ ದಾರಿದ್ರ್ಯ ದೂರವಾಗುತ್ತದೆ. ನಂತರ ಹೊಸ ಬಟ್ಟೆಗಳನ್ನು ಧರಿಸಿ ಸುಗಂಧ ದ್ರವ್ಯ ಲೇಪಿಸಿಕೊಂಡು ತಮ್ಮ ಕುಲ ದೇವರ ಪೂಜೆ ಮಾಡುತ್ತಾರೆ.
ಹೆಣ್ಣುಮಕ್ಕಳು ಚೆನ್ನಾಗಿ ಅಲಂಕಾರ ಮಾಡಿಕೊಂಡು ದೇವರ ಪೂಜೆ ಮಾಡುತ್ತಾರೆ. ಕೆಟ್ಟ ಶಕ್ತಿಗಳಿಂದ ರಕ್ಷಿಸಿಕೊಳ್ಳಲು ಕಣ್ಣಿಗೆ ಕಾಡಿಗೆಯನ್ನು ಹಚ್ಚಿಕೊಳ್ಳುತ್ತಾರೆ. ಕುಲ ದೇವರಿಗೆ ವಿಶೇಷ ನೈವೇದ್ಯ ಇಟ್ಟ ನಂತರ ಮನೆಮಂದಿಯಲ್ಲ ಒಟ್ಟಿಗೆ ಕುಳಿತು ಕಜ್ಜಾಯ, ಸಿಹಿ ತಿಂಡಿ ತಿನ್ನುತ್ತಾರೆ. ಮನೆಯಲ್ಲಿನ ಬಡತನ, ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಲು ಸಂಜೆ ಮನೆ ಮುಂದೆ ದೀಪಗಳನ್ನು ಹಚ್ಚುತ್ತಾರೆ. ನರಕದಿಂದ ಮುಕ್ತಿ ಹೊಂದಲು, ಪಾಪದದಿಂದ ಮುಕ್ತಿ ಹೊಂದಲು, ದಾರಿದ್ರ್ಯದಿಂದ ಮುಕ್ತಿ ಹೊಂದಲು ಸಂಜೆ ಯಮರಾಜನಿಗಾಗಿ ಒಂದು ವಿಶೇಷ ಕನಕಿನ ದೀಪವನ್ನು ಹಚ್ಚುತ್ತಾರೆ. ಈ ದೀಪವನ್ನು ಮನೆಯ ಮೂಲೆ ಮೂಲೆಗೆ ಬೆಳಗಿದ ನಂತರ ಮನೆಯಾಚೆ ಹಚ್ಚಿ ಯಮದೇವನಿಗೆ ನಮಸ್ಕರಿಸುತ್ತಾರೆ. ಈ ರೀತಿ ಮಾಡುವುದರಿಂದ ಅಕಾಲ ಮೃತ್ಯು ದೋಷ ದೂರವಾಗುತ್ತದೆ. ಮಕ್ಕಳೆಲ್ಲ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಇಲ್ಲಿ ಮತ್ತೊಂದು ವಿಶೇಷ ಏನೆಂದರೆ ಈ ದಿನ ತಂತ್ರಿಗಳು ಮಂತ್ರಗಳನ್ನು ಕಲಿಯುತ್ತಾರೆ. ಕೆಲವರು ತಮ್ಮ ಕುಲ ದೇವರ ದರ್ಶನ ಪಡೆದುಕೊಡು ಆರ್ಥಿಕವಾಗಿ ಸಾಮಾಜಿಕವಾಗಿ ಬಲಿಷ್ಠರಾಗುತ್ತಾರೆ. ಹೆಚ್ಚಿನ ಆಯಸ್ಸು, ಆರೋಗ್ಯ ಹಾಗೂ ಅಂತಸ್ತನ್ನು ಪಡೆದುಕೊಳ್ಳುತ್ತಾರೆ.
ನರಕ ಚತುರ್ದಶಿ ಹಿನ್ನೆಲೆಯೇನು?: ಪುರಾಣಗಳ ಪ್ರಕಾರ, ಪ್ರಾಚೀನ ಕಾಲದಲ್ಲಿ, ಪ್ರಾಗ್ಜ್ಯೋತಿಷಪುರದ ರಾಕ್ಷಸರಾಜ ನರಕಾಸುರನು ತನ್ನ ಶಕ್ತಿಗಳಿಂದ ದೇವತೆಗಳು ಮತ್ತು ಋಷಿಗಳೊಂದಿಗೆ ಯುದ್ಧ ಮಾಡಿ, 16 ಸಾವಿರ ಗೋಪಿಕೆಯರನ್ನು ಒತ್ತೆಯಾಗಿ ತನ್ನೊಂದಿಗೆ ಕರೆದುಕೊಂಡು ಹೋಗಿರುತ್ತಾನೆ. ಇದರಿಂದಾಗಿ ನರಕಾಸುರನು ಮಹಿಳೆಯ ಕೈಯಲ್ಲಿ ಸಾಯುವ ಶಾಪ ಪಡೆದನು. ಆದ್ದರಿಂದ ಭಗವಾನ್ ಶ್ರೀ ಕೃಷ್ಣನು ತನ್ನ ಹೆಂಡತಿ ಸತ್ಯಭಾಮೆಯ ಸಹಾಯದಿಂದ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ನರಕಾಸುರನನ್ನು ಕೊಂದು 16 ಸಾವಿರ ಗೋಪಿಕೆಯರನ್ನು ಸೆರೆಯಿಂದ ರಕ್ಷಿಸಿದನು. ಈ ಕಾರಣಕ್ಕಾಗಿ ನರಕ ಚತುರ್ದಶಿಯನ್ನು ನರಕಾಸುರನ ವಿರುದ್ಧ ಶ್ರೀಕೃಷ್ಣನ ವಿಜಯದ ದಿನವೆಂದು ಆಚರಿಸಲಾಗುತ್ತದೆ ಎಂಬ ಪ್ರತೀತಿ ಇದೆ.
ಪೂಜೆಯ ವಿಧಾನ ಹೇಗೆ?: ನರಕ ಚತುರ್ದಶಿ ಎಂದು ಸೂರ್ಯೋದಯಕ್ಕೆ ಮುನ್ನ ಎದ್ದು ಎಣ್ಣೆಯನ್ನು ಹಚ್ಚಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ನಂತರ ಯಮರಾಜನ ವಾಮನ ರೂಪ, ಶ್ರೀ ಕೃಷ್ಣ, ಕಾಳಿ ಮಾತೆ, ಭಗವಾನ್ ಶಿವ, ಹನುಮಂತ ಮತ್ತು ವಿಷ್ಣುವಿನ ವಿಶೇಷ ಪೂಜೆಯನ್ನು ಮಾಡಬೇಕು. ಈ ಎಲ್ಲ ದೇವರುಗಳ ವಿಗ್ರಹಗಳನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಇಟ್ಟು ವಿಧಿ - ವಿಧಾನಗಳ ಪ್ರಕಾರ ಪೂಜಿಸಿ. ಧೂಪ ದೀಪಗಳನ್ನು ಬೆಳಗಿ, ಆರತಿ ಮಾಡಿ ದೇವರನ್ನು ಪ್ರಾರ್ಥಿಸುತ್ತಾರೆ. ನರಕ ಚತುರ್ದಶಿ ದಿನದಂದು ಯಮ ದೇವನನ್ನು ಪೂಜಿಸುವುದರಿಂದ ಕುಟುಂಬದ ಪ್ರತಿಯೊಬ್ಬ ಸದಸ್ಯರು ಅಕಾಲಿಕ ಮರಣದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ.
ಧನ ಲಕ್ಷ್ಮಿಪೂಜೆ ಮಹತ್ವವೇನು?: ದೀಪಾವಳಿ ಅಮಾವಾಸ್ಯೆಯಂದು ಮಾಡುವ ಧನಲಕ್ಷ್ಮೀ ಪೂಜೆಗೆ ನಮ್ಮ ಶಾಸ್ತ್ರಗಳಲ್ಲಿ ವಿಶೇಷ ಮಹತ್ವ ಇದೆ. ಲಕ್ಷ್ಮೀದೇವಿ ಸಂಪತ್ತಿನ ಅಧಿದೇವತೆ ಮಾತ್ರವಲ್ಲ. ಜೀವನದಲ್ಲಿ ಸುಖ ಸಮೃದ್ಧಿಗೆ ಕಾರಣವಾಗುವ ಎಲ್ಲವನ್ನೂ ಅವಳು ಕೊಡುತ್ತಾಳೆ. ಹೀಗಾಗಿ, ಲಕ್ಷ್ಮೀದೇವಿಯನ್ನು ಅಷ್ಟಲಕ್ಷ್ಮಿಯರ ರೂಪದಲ್ಲಿ ಪೂಜಿಸಲಾಗುತ್ತದೆ. ಅಷ್ಟಲಕ್ಷ್ಮೀಯರಲ್ಲಿ ಲಕ್ಷ್ಮೀಯ ಒಂದು ರೂಪವೇ ಧನಲಕ್ಷ್ಮೀ. ಇದೇ ಧನಲಕ್ಷ್ಮೀ ಪೂಜೆಯನ್ನು ದೀಪಾವಳಿ ಅಮಾವಾಸ್ಯೆಯಂದು ಮಾಡಬೇಕು. ಅಮಾವಾಸ್ಯೆಯ ದಿನ ಲಕ್ಷ್ಮೀ ಪೂಜೆಯಿಂದ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: 24 ಲಕ್ಷ ದೀಪಗಳಿಂದ ಬೆಳಗಿದ ರಾಮಭೂಮಿ ಅಯೋಧ್ಯಾ - ನೋಡಿ ವೈಭವದ ವಿಡಿಯೋ