ಬೆಂಗಳೂರು: ಅಮೃತ ಯೋಜನೆಯ ಮನೆಗಳನ್ನೂ ಒಳಗೊಂಡಂತೆ ಒಟ್ಟು 6 ಲಕ್ಷ ಮನೆಗಳನ್ನು ಡಿಸೆಂಬರ್ ತಿಂಗಳೊಳಗೆ ಪೂರ್ಣಗೊಳಿಸುವಂತೆ ವಸತಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
2022-23 ನೇ ಸಾಲಿನ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಗರಿಷ್ಠ ಮೂರು ತಿಂಗಳೊಳಗೆ ಮುಕ್ತಾಯವಾಗಬೇಕು. ನಿವೇಶನ ಹಂಚಿಕೆ ಸಂಬಂಧ ರಾಜ್ಯದ ವಿವಿಧ ಭಾಗಗಳಲ್ಲಿರುವ ಆಸ್ತಿಗೆ ಆದ್ಯತೆ ಮೇರೆಗೆ ಡಿಪಿಆರ್ ಮಾಡಿ ಸಲ್ಲಿಸಬೇಕೆಂದು ಹೇಳಿದರು.
ಬೆಂಗಳೂರು ವಸತಿ ಯೋಜನೆಯಡಿ ಪ್ರಗತಿಯಲ್ಲಿರುವ ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿಗಳ ಪೈಕಿ 20 ಸಾವಿರ ಮನೆಗಳನ್ನು ಪೂರ್ಣಗೊಳಿಸುವ ಗುರಿ ಇದೆ. ಈ ಮನೆಗಳನ್ನು ಪೂರ್ಣಗೊಳಿಸಲು ಅನುದಾನವನ್ನು ಹಂತ - ಹಂತವಾಗಿ ಅನುದಾನ ಬಿಡುಗಡೆ ಮಾಡುವುದು. ಕೀಲಿ ಕೈ ಹಸ್ತಾಂತರ ಮಾಡುವ ಮುನ್ನ ಷರತ್ತುಗಳನ್ನು ವಿಧಿಸಬೇಕು. ಮುಗಿಯುವ ಹಂತದಲ್ಲಿರುವ ಮನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿ, ಸಾಲವನ್ನು ಫಲಾನುಭವಿಗಳ ಹೆಸರಿಗೆ ವರ್ಗಾವಣೆ ಮಾಡಿಸಬೇಕು ಎಂದು ಸಿಎಂ ಸೂಚನೆ ನೀಡಿದರು.
ಇದನ್ನೂ ಓದಿ: ಸಿಎಂ ಹುದ್ದೆಗಾಗಿ ಲಂಚ ಸತ್ಯ ಇರ್ಬೋದು ಎಂದ ಸಿದ್ದರಾಮಯ್ಯ: ತನಿಖೆ ನಡೆಸಲು ಸತೀಶ್ ಜಾರಕಿಹೊಳಿ ಆಗ್ರಹ