ಬೆಂಗಳೂರು: ರಾಯಚೂರಿನ ಸ್ಥಳೀಯ ಸಂಸ್ಥೆಯ ಚುನಾವಣೆ ಹಿನ್ನೆಲೆ ಮತ ಚಲಾಯಿಸದೆ ಗೈರು ಹಾಜರಾಗುವಂತೆ ಮಾಡಲು ನಗರಸಭಾ ಸದಸ್ಯೆಯಾಗಿರುವ ಶೈನಾಜ್ ಬೇಗಂ ಅವರನ್ನು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅಪಹರಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಬೇಗಂ ಪುತ್ರ ಎಂ ಡಿ ಆಲಿ ಎಂಬುವವರು ದೂರು ನೀಡಿದ್ದಾರೆ.
ರಾಯಚೂರಿನ ನಗರಸಭಾ ಅಧ್ಯಕ್ಷರ ಚುನಾವಣೆ ನಿಗದಿಯಾಗಿದೆ. ನನ್ನ ತಾಯಿ ಶೈನಾಜ್ ಬೇಗಂ ನಗರಸಭಾ ಸದಸ್ಯೆಯಾಗಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಇನ್ಫೆಂಟ್ರಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ಚಿಕಿತ್ಸೆಗೆ ದಾಖಲಾಗಿದ್ದರು. ಈ ವೇಳೆ ಶಾಸಕರ ಕಾರಿನಲ್ಲಿ ಬೆಂಬಲಿಗರು ಬಂದು ನನ್ನ ತಾಯಿ, ತಮ್ಮ ಹಾಗೂ ಅತ್ತೆಯನ್ನ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಿದರು.
ಸತತವಾಗಿ ಫೋನ್ ಮಾಡಿದರೂ ಸ್ವಿಚ್ ಆಫ್ ಬರುತ್ತಿದೆ. ಅಪಹರಣದ ಹಿಂದೆ ಶಿವರಾಜ್ ಪಾಟೀಲ್ ಅವರ ಕೈವಾಡವಿದೆ. ನಾಳೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸದಂತೆ ಮಾಡಲು ಕಿಡ್ನ್ಯಾಪ್ ಮಾಡಿದ್ದಾರೆ. ರಾಜಕೀಯ ಮಾಡುವ ನೆಪದಲ್ಲಿ ಕುಟುಂಬ ಸದಸ್ಯರನ್ನು ಅಪಹರಿಸಿರುವುದು ಸರಿಯಲ್ಲ. ದಯವಿಟ್ಟು ನಮ್ಮ ಕುಟುಂಬದ ಸದಸ್ಯರನ್ನ ಬಿಡುವಂತೆ ಶಾಸಕರಲ್ಲಿ ಆಲಿ ಮನವಿ ಮಾಡಿದ್ದಾರೆ.
ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸೂರ್ಯ ಮುಕುಂದರಾಜ್ ಮಾತನಾಡಿ, ನಗರಸಭಾ ಸದಸ್ಯೆ ಶೈನಾಜ್ ಬೇಗಂ ಅವರನ್ನ ಕಿಡ್ನ್ಯಾಪ್ ಮಾಡಿದ ಆರೋಪದಡಿ ಇಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ನೀಡಿದ್ದೇವೆ. ಸಕಾರಾತ್ಮಕವಾಗಿ ಸ್ಪಂದಿಸಿರುವ ಆಯುಕ್ತರು ವಿಧಾನಸೌಧ ಪೊಲೀಸರಿಗೆ ದೂರನ್ನ ಹಸ್ತಾಂತರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುವುದಾಗಿ ಅವರು ತಿಳಿಸಿದರು.
ಓದಿ: ಕಾರವಾರದ ಬೈತಖೋಲ್ ವಾಣಿಜ್ಯ ಬಂದರು ವಿಸ್ತರಣೆಗೆ ತಡೆ: ಸುಪ್ರೀಂಕೋರ್ಟ್ ಮೌಖಿಕ ಆದೇಶ