ಬೆಂಗಳೂರು: ಜೂನ್ ಅಂತ್ಯಕ್ಕೆ ಖಾಲಿಯಾಗಲಿರುವ ವಿಧಾನಪರಿಷತ್ನ ಒಂದು ಸ್ಥಾನಕ್ಕೆ ಜೆಡಿಎಸ್ನಲ್ಲಿ ಪೈಪೋಟಿ ಆರಂಭವಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ವಿಧಾನ ಪರಿಷತ್ನ ಸದಸ್ಯ ಟಿ.ಎ. ಶರವಣ ಅವರ ಅವಧಿ ಜೂನ್ಗೆ ಮುಗಿಯಲಿದ್ದು, ವಿಧಾನಸಭೆಯಿಂದ ಮೇಲ್ಮನೆಗೆ ಆಯ್ಕೆಯಾಗಲಿರುವ ಈ ಸ್ಥಾನಕ್ಕೆ ಅಗತ್ಯವಾದ ಸಂಖ್ಯಾಬಲ ಜೆಡಿಎಸ್ಗೆ ಇದೆ. ಹಾಗಾಗಿ, ಒಂದು ಸ್ಥಾನ ಜೆಡಿಎಸ್ ಗೆ ಸಿಗಲಿದೆ. ಈ ಒಂದು ಸ್ಥಾನಕ್ಕೆ ಹಲವಾರು ಮಂದಿ ಆಕಾಂಕ್ಷಿಗಳಿದ್ದು, ಈಗಾಗಲೇ ಜೆಡಿಎಸ್ ವರಿಷ್ಠರ ಬಳಿ ಲಾಬಿ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಸದಸ್ಯರಾಗಿರುವ ಟಿ.ಎ. ಶರವಣ ಅವರು ಮತ್ತೆ ಮೇಲ್ಮನೆಗೆ ಪುನರಾಯ್ಕೆ ಬಯಸಿದ್ದಾರೆ. ಮತ್ತೊಂದು ಅವಕಾಶ ಕೊಟ್ಟರೆ ಪಕ್ಷದ ಕೆಲಸ ಮಾಡುವುದಾಗಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅದೇ ರೀತಿ ಪರಿಷತ್ ಪ್ರವೇಶಿಸಲು ಜೆಡಿಎಸ್ನ ಬೆಂಗಳೂರು ಘಟಕ ಅಧ್ಯಕ್ಷ ಪ್ರಕಾಶ್, ಮಾಜಿ ಶಾಸಕ ಕೋನರೆಡ್ಡಿ ಸೇರಿದಂತೆ ಹಲವು ನಾಯಕರು ಉತ್ಸುಕತೆ ತೋರಿದ್ದಾರೆ.
ಕಾರ್ಯಕರ್ತರ ಪಟ್ಟು: ಒಂದೆಡೆ ಮೇಲ್ಮನೆ ಸ್ಥಾನಕ್ಕಾಗಿ ಆಕಾಂಕ್ಷಿಗಳು ಲಾಬಿ ಆರಂಭಿಸಿದ್ದರೆ, ಮತ್ತೊಂದೆಡೆ ಪಕ್ಷದ ಕಾರ್ಯಕರ್ತರು ವರಿಷ್ಠರ ಮುಂದೆ ಹೊಸ ಬೇಡಿಕೆ ಇಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೊನೆಗಳಿಗೆಯಲ್ಲಿ ಹೊರಗಡೆಯಿಂದ ಬೇರೆಯವರು ಬಂದು ಜೆಡಿಎಸ್ನಿಂದ ಆಯ್ಕೆಯಾಗುತ್ತಾರೆ ಅನ್ನುವ ಆರೋಪ ಇದೆ. ಹೀಗಾಗಿ, ಯಾವುದೇ ಕಾರಣಕ್ಕೂ ಹೊರಗಡೆಯಿಂದ ಕರೆತಂದ ವ್ಯಕ್ತಿಗೆ ಈ ಬಾರಿ ಸ್ಥಾನ ನೀಡಬಾರದೆಂದು ಕಾರ್ಯಕರ್ತರು ಷರತ್ತು ಹಾಕಿದ್ದಾರೆ.
ಪಕ್ಷದಲ್ಲಿ ದುಡಿಯುವ ನಿಷ್ಠಾವಂತರಿಗೆ ಮೇಲ್ಮನೆ ಸ್ಥಾನ ನೀಡಬೇಕೆಂದು ಜೆಡಿಎಸ್ ವರಿಷ್ಠರಿಗೆ ಮನವಿ ಮಾಡಲು ಕೆಲವರು ತೀರ್ಮಾನಿಸಿದ್ದಾರೆ. ಪಕ್ಷದಲ್ಲಿ ಏನೇ ನಿರ್ಧಾರ ಆಗಬೇಕಾದರೂ ಹೈಕಮಾಂಡ್ ಹೆಚ್.ಡಿ.ದೇವೇಗೌಡರೇ ಅಂತಿಮ. ಯಾರೂ ಸಹ ಅವರ ಮಾತು ಮೀರುವುದಿಲ್ಲವೆಂಬುದು ಗೊತ್ತಿರುವ ಸಂಗತಿ. ಇನ್ನೂ ಐದು ತಿಂಗಳು ಸಮಯಾವಕಾಶ ಇದೆ. ಹಾಗಾಗಿ, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಆ ಬಗ್ಗೆ ಇನ್ನು ಹೆಚ್ಚಿನ ಗಮನಹರಿಸಿಲ್ಲ ಎನ್ನಲಾಗಿದೆ.
ಉ. ಕರ್ನಾಟಕದಲ್ಲಿ ನೋಂದಣಿ ಕಾರ್ಯ: ಉಪಚುನಾವಣೆ ಬಳಿಕ ಪಕ್ಷಕ್ಕೆ ಹಿನ್ನೆಡೆ ಉಂಟಾಗಿದ್ದು, ಆ ಬಗ್ಗೆ ಆಲೋಚಿಸುತ್ತಿರುವ ಗೌಡರು, ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದಾರೆ. ಮುಖಂಡರು ಹಾಗೂ ಕಾರ್ಯಕರ್ತರದಲ್ಲಿ ಶಕ್ತಿ ತುಂಬಲು ಇತ್ತೀಚೆಗಷ್ಟೆ ಜೆಡಿಎಸ್ ಸಮಾವೇಶ ಹಮ್ಮಿಕೊಂಡಿದ್ದರು. ಮುಂದಿನ ತಿಂಗಳು ಮಹಿಳಾ ಸಮಾವೇಶ ನಡೆಸುವ ಬಗ್ಗೆಯೂ ದೇವೇಗೌಡರು ಚಿಂತನೆ ನಡೆಸಿದ್ದಾರೆ. ಉತ್ತರ ಕರ್ನಾಟಕದಲ್ಲೂ ಪಕ್ಷ ಬಲವರ್ಧನೆ ಮಾಡಲು ಆಲೋಚಿಸಿರುವ ಗೌಡರು, ಸದಸ್ಯತ್ವ ನೋಂದಣಿ ಕಾರ್ಯಕ್ಕೂ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.