ಬೆಂಗಳೂರು: ಅಪಘಾತದಲ್ಲಿ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಉಂಟಾದ ನಷ್ಟ ಪ್ರಮಾಣವನ್ನು ಸರಿದೂಗಿಸುವ ಬಾಧ್ಯತೆ ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಾಧಿಕರಣದ ಮೇಲಿರಲಿದೆ ಎಂದು ಹೈಕೋರ್ಟ್ ಆದೇಶಿಸಿದೆ. ಆದರೆ, ಪರಿಹಾರಕ್ಕೆ ಅರ್ಹರಿರುವ ವ್ಯಕ್ತಿ ಅದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಒದಗಿಸಬೇಕಾಗಿರುವುದು ಕೂಡ ಅತ್ಯಗತ್ಯ ಎಂದು ಪೀಠ ತಿಳಿಸಿದೆ.
ನ್ಯಾಯಾಧಿಕರಣ ಆದೇಶಿಸಿದ್ದ ಮೊತ್ತಕ್ಕಿಂತಲೂ ಹೆಚ್ಚು ಮೊತ್ತ ದುರಸ್ತಿಗೆ ವೆಚ್ಚವಾಗಿದ್ದು, ಈ ಮೊತ್ತ ಪಾವತಿಸಲು ವಿಮಾ ಕಂಪೆನಿಗೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ್ದ ನ್ಯಾಯಧಿಕರಣದ ಕ್ರಮ ಪ್ರಶ್ನಿಸಿ, ಬೆಂಗಳೂರು ನಿವಾಸಿ ಟ್ಯಾಕ್ಸಿ ಚಾಲಕ ಹೇಮಂತ್ ರಾಜು ಎಂಬುವರು ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಿಲ್ಲಾಕೂರು ಸುಮಲತಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಮೇಲ್ಮನವಿದಾರರ ಕಾರು ಅಪಘಾತ ಸಂಬಂಧ ವಿಮಾ ಕಂಪೆನಿ 77,051 ಸಾವಿರ ರೂ. ಪಾವತಿ ಮಾಡಿದೆ. ಆದರೆ, ವಾಹನ ದುರಸ್ತಿಗಾಗಿ 1,10,375 ರೂ. ಖರ್ಚಾಗಿದೆ ಎಂದು ದಾಖಲೆಗಳಿಂದ ತಿಳಿದು ಬಂದಿದೆ. ಅಲ್ಲದೆ, ಹೆಚ್ಚುವರಿಯಾಗಿ 33,324 ರೂ. ಪಾವತಿಸಿರುವುದಕ್ಕೆ ಸಾಕ್ಷ್ಯಾಧಾರಗಳಿವೆ. ಆದ್ದರಿಂದ ನಷ್ಟದ ಮೊತ್ತವನ್ನೂ ಸಂಕಷ್ಟಕ್ಕೆ ಸಿಲುಕಿದವರೇ ಭರಿಸುವುದಕ್ಕೆ ಅವಕಾಶವಿರುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧಿಕರಣ ಈ ಹಿಂದೆ ನೀಡಿದ್ದ ಆದೇಶದಂತೆ 77,051 ಸಾವಿರ ರೂ.ನೊಂದಿಗೆ ಹೆಚ್ಚುವರಿಯಾಗಿ 53,324 ರೂ. ಅನ್ನು ಶೇ.6ರ ಬಡ್ಡಿದರಲ್ಲಿ ಪಾವತಿ ಮಾಡಬೇಕು. ಜೊತೆಗೆ, ಜಖಂಗೊಂಡಿದ್ದ ಕಾರು ದುರಸ್ತಿ ಮಾಡಿಸಲು ಎರಡು ತಿಂಗಳ ಅವಧಿಗೆ ಉಂಟಾದ ನಷ್ಟಕ್ಕೆ ಪರಿಹಾರವನ್ನಾಗಿ 20 ಸಾವಿರ ರೂ. ನೀಡಲು ಪ್ರತಿವಾದಿ ಫ್ಯೂಚರ್ ಜನರಲ್ ಇನ್ಶೂರೆನ್ಸ್ ಮತ್ತು ಹೆಚ್.ಜೆ ಪುನೀತಾ ಎಂಬುವರಿಗೆ ನಿರ್ದೇಶಿಸಿದೆ.
ತಪ್ಪಿತಸ್ಥ ವಾಹನದ ವಿಮಾದಾರ ಹಾನಿಗೊಳಗಾದ ವಾಹನದ ದುರಸ್ತಿಗೆ ವೆಚ್ಚವಾದ ಒಟ್ಟು ಮೊತ್ತ ಪಾವತಿ ಮಾಡದಿದ್ದಲ್ಲಿ, ಸಂಪೂರ್ಣ ಮೊತ್ತ ಪಾವತಿಸಲು ನಿರ್ದೇಶನ ನೀಡುವಂತೆ ಕೋರಿ ನ್ಯಾಯಮಂಡಳಿಯಲ್ಲಿ ಮನವಿ ಸಲ್ಲಿಸಲು ಹಾನಿಗೊಳಗಾದ ವಾಹನದ ವ್ಯಕ್ತಿ ಸಂಪೂರ್ಣ ಅಧಿಕಾರ ಹೊಂದಿರುತ್ತಾನೆ ಎಂದು ಪೀಠ ತಿಳಿಸಿದೆ.
ಮೇಲ್ಮನವಿದಾರರು ವಾಹನ ಟೈರ್‌ಗಳು ಹಾಳಾಗಿರುವುದರಿಂದ 60 ಸಾವಿರ ರೂ.ಗಳ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಈ ನಿಟ್ಟಿನಲ್ಲಿ ಕಾರಿನ ದುರಸ್ತಿ ಕಾರ್ಯಕ್ಕಾಗಿ ಎರಡು ತಿಂಗಳು ಆದಾಯ ನಷ್ಟವಾಗಿದ್ದು, ಪ್ರತಿ ತಿಂಗಳ 10 ಸಾವಿರದಂತೆ ಎರಡು ತಿಂಗಳಿಗೆ 20 ಸಾವಿರ ರೂ.ಗಳನ್ನು ಪಾವತಿಸಲು ಪ್ರತಿವಾದಿಗಳಿಗೆ ಸೂಚನೆ ನೀಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ : 2011ರ ಅಕ್ಟೋಬರ್ 23ರಂದು ಮೇಲ್ಮನವಿದಾರ ಹೇಮಂತ್ ರಾಜು ಅವರ ಟ್ಯಾಕ್ಸಿಗೆ ಸಿಟಿ ಮಾರ್ಕೆಟ್ ವೃತ್ತದ ಬಳಿ ಪ್ರತಿವಾದಿ ಹೆಚ್.ಜಿ.ಪುನೀತಾ ಎಂಬುವರು ತಮ್ಮ ಕಾರಿನಲ್ಲಿ ಬಂದು ಡಿಕ್ಕಿ ಹೊಡೆದಿದ್ದರು. ಪರಿಣಾಮ ಟ್ಯಾಕ್ಸಿ ವಿದ್ಯುತ್ ಕಂಬಕ್ಕೆ ಹೊಡೆದು ಸಂಪೂರ್ಣ ಜಖಂಗೊಂಡಿತ್ತು. ಇದಕ್ಕಾಗಿ ಹೇಮಂತ್ ರಾಜು ಅವರು ಎರಡು ಲಕ್ಷ ರೂ. ಪರಿಹಾರ ನೀಡಬೇಕು ಎಂದು ಮೋಟಾರು ವಾಹನ ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ 77,051 ರೂ. ಪರಿಹಾರ ನೀಡಿ ಆದೇಶಿಸಿತ್ತು.
ಆದರೆ, ಟ್ಯಾಕ್ಸಿ ದುರಸ್ತಿಗೆ ಎರಡು ತಿಂಗಳ ಕಾಲಾವಧಿ ಮತ್ತು ನ್ಯಾಯಾಧಿಕರಣ ಸೂಚನೆ ನೀಡಿದ್ದ ಮೊತ್ತಕ್ಕಿಂತ 33,324 ರೂ. ಹೆಚ್ಚುವರಿಯಾಗಿ ವೆಚ್ಚವಾಗಿತ್ತು. ಪರಿಣಾಮ ನ್ಯಾಯಾಧಿಕರಣಕ್ಕೆ ಮತ್ತೆ ಅರ್ಜಿ ಸಲ್ಲಿಸಿದ್ದ ಹೇಮಂತ್, ಎರಡು ತಿಂಗಳ ನಷ್ಟ ಮತ್ತು ಹೆಚ್ಚುವರಿ ವೆಚ್ಚವನ್ನು ಕೊಡಿಸುವಂತೆ ಕೋರಿ ನ್ಯಾಯಾಧಿಕರಣಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ನ್ಯಾಯಾಧಿಕರಣ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ಅಪಘಾತದಿಂದಾಗಿ ವಾಹನ ಜಖಂಗೊಂಡಿದ್ದು, ದುರಸ್ತಿಗಾಗಿ ಎರಡು ತಿಂಗಳು ಬಿಡಲಾಗಿದೆ. ಇದರಿಂದ ಆದಾಯದಲ್ಲಿ 60 ಸಾವಿರ ರೂ. ನಷ್ಟ ಅನುಭವಿಸಿದ್ದೇನೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರತಿವಾದಿ ಪುನೀತಾ, ಮೇಲ್ಮನವಿದಾರರು ಹೇಳಿರುವಂತೆ ಅಪಘಾತ ಸಂಭವಿಸಿಲ್ಲ. ವಾಹನಕ್ಕೆ ಹಾನಿಯೂ ಆಗಿಲ್ಲ ಎಂದು ವಾದಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಪೀಠ ಈ ಆದೇಶ ನೀಡಿದೆ.
ಇದನ್ನೂ ಓದಿ: 'ಪಾರ್ಕ್, ಆಟದ ಮೈದಾನಕ್ಕೆ ಮೀಸಲಿಟ್ಟ ಜಾಗ 5 ವರ್ಷದಲ್ಲಿ ಅಭಿವೃದ್ಧಿ ಮಾಡದಿದ್ದಲ್ಲಿ ರದ್ದಾಗಲಿದೆ'