ಬೆಂಗಳೂರು: ಮೃತ ಸರ್ಕಾರಿ ನೌಕರನ ಪತ್ನಿ, ಪುತ್ರ ಹಾಗೂ ಅವಿವಾಹಿತ ಪುತ್ರಿಯಷ್ಟೇ ಅಲ್ಲದೆ, ವಿವಾಹಿತ ಪುತ್ರಿಯೂ ಸಹ ಅನುಕಂಪದ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಿವಾಹವಾದ ಕಾರಣಕ್ಕೆ ಅನುಕಂಪದ ಉದ್ಯೋಗ ನೀಡಲು ನಿರಾಕರಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಭುವನೇಶ್ವರಿ ವಿ.ಪುರಾಣಿಕ್ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.
ಈವರೆಗೂ ಪತ್ನಿ, ಪುತ್ರ ಅಥವಾ ಅವಿವಾಹಿತ ಪುತ್ರಿ ಅನುಕಂಪದ ಉದ್ಯೋಗವನ್ನು ಕೋರಬಹುದಾಗಿತ್ತು. ವಿವಾಹಿತ ಪುತ್ರಿ ಅನುಕಂಪದ ನೌಕರಿಗೆ ಅವಕಾಶವಿರಲಿಲ್ಲ. ಹೈಕೋರ್ಟ್ ನೀಡಿರುವ ಈ ಆದೇಶದಿಂದಾಗಿ ವಿವಾಹಿತ ಪುತ್ರಿಯೂ ಅನುಕಂಪದ ಉದ್ಯೋಗ ಕೋರಲು ಅರ್ಹರಾಗಿದ್ದಾರೆ.
ಇದನ್ನೂ ಓದಿ : ಬಿಗ್ ಬ್ರೇಕಿಂಗ್: ಭಾರತ್ ಬಯೋಟೆಕ್ನ ಕೊವಾಕ್ಸಿನ್ ಲಸಿಕೆ ಪರಿಣಾಮಕಾರಿ ಫಲಿತಾಂಶ!
ಮಗನಂತೆಯೇ ಮಗಳೂ ಕೂಡ ವಿವಾಹದ ನಂತರವೂ ಮಗಳಾಗಿರುತ್ತಾಳೆ. ವಿವಾಹಿತ ಪುತ್ರಿ ಅನುಕಂಪದ ಉದ್ಯೋಗ ಕೋರಲು ಅರ್ಹಳಲ್ಲ ಎಂಬ ಸರ್ಕಾರದ ನಿಯಮ ಲಿಂಗ ತಾರತಮ್ಯ ಸೃಷ್ಟಿಸುತ್ತದೆ. ಲಿಂಗ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ಪುತ್ರನ ವೈವಾಹಿಕ ಸ್ಥಾನಮಾನವು ಅನುಕಂಪದ ಉದ್ಯೋಗ ಕೋರಲು ಅರ್ಹರಾಗಿರುವಾಗ, ವಿವಾಹಿತ ಮಗಳು ಸಹ ಅನುಕುಂಪದ ಉದ್ಯೋಗವನ್ನು ಕೋರಲು ಅರ್ಹಳಾಗಿರುತ್ತಾಳೆ. ಪುತ್ರ ಮತ್ತು ಪುತ್ರಿಯ ವೈವಾಹಿಕ ಸ್ಥಾನಮಾನವು ಅನುಕುಂಪದ ಉದ್ಯೋಗ ಕೋರುವುದಲ್ಲಿ ಯಾವುದೇ ವ್ಯತ್ಯಾಸ ಉಂಟು ಮಾಡುವುದಿಲ್ಲ ಎಂದು ಆದೇಶಿಸಿದೆ.
ಜತೆಗೆ, ಪುತ್ರಿ ವಿವಾಹವಾದ ಕೂಡಲೇ ಆಕೆ ಆ ಕುಟುಂಬದ ಭಾಗವಾಗಿಲ್ಲ ಎಂದು ಹೇಳಲು ಬರುವುದಿಲ್ಲ. ವಿವಾಹಿತ ಪುತ್ರ ಮಾತ್ರ ಕುಟುಂಬದ ಭಾಗವಾಗಿ ಮುಂದುವರಿಯುತ್ತಾನೆ ಎಂದು ಯಾವುದೇ ಕಾನೂನು ಊಹಿಸಲು ಸಾಧ್ಯವಿಲ್ಲ. ಮದುವೆ ಆಧಾರದ ಮೇಲೆ ಅನುಕಂಪದ ಉದ್ಯೋಗ ನಿರಾಕರಿಸಲು ಬರುವುದಿಲ್ಲ. ಸರ್ಕಾರಿ ಉದ್ಯೋಗಿಯ ಪುತ್ರಿಯ ವಿವಾಹವು ಪೋಷಕರ ಸಾಮಾಜಿಕ ಬದ್ಧತೆಯಾಗಿರುತ್ತದೆ.
ಆ ಸಾಮಾಜಿಕ ಬದ್ಧತೆಯೇ ಅನುಕಂಪದ ಉದ್ಯೋಗ ಕೋರಲು ಪುತ್ರಿಯನ್ನು ಅನರ್ಹ ಮಾಡುತ್ತದೆ ಎಂದರೆ ಒಪ್ಪಲಾಗದು. ಹೀಗಾಗಿ, ವಿವಾಹಿತ ಪುತ್ರಿಯನ್ನು ಹೊರಗಿಟ್ಟು ‘ಕುಟುಂಬ’ವನ್ನು ಅರ್ಥೈಸುವ ಮತ್ತು ವಿವಾಹಿತ ಪುತ್ರಿ ಅನುಕಂಪದ ಉದ್ಯೋಗ ಕೋರಲು ಅನರ್ಹಳು ಎಂದು ಪ್ರತಿಪಾದಿಸುವ ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ನೇಮಕಾತಿ) ಅಧಿನಿಯಮದ 1996ರ ನಿಯಮ 2(1)(ಎ)(ಐ), ನಿಯಮ 2(1)(ಬಿ) ಮತ್ತು 3(2)(ಐ)(ಸಿ) ತಾರತಮ್ಯದಿಂದ ಕೂಡಿದ್ದು, ಸಂವಿಧಾನದ ಪರಿಚ್ಛೇದ 14 ಮತ್ತು 15 ಅನ್ನು ಉಲ್ಲಂಘಿಸುತ್ತದೆ ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ : ಅಶೋಕ್ ಅಡಿವೆಪ್ಪ ಮಡಿವಾಳ್ ಎಂಬುವರು ಬೆಳಗಾವಿ ಜಿಲ್ಲೆಯ ಕುಡುಚಿ ಗ್ರಾಮದ ಎಪಿಎಂಸಿ ಕಚೇರಿಯಲ್ಲಿ ಕಾರ್ಯದರ್ಶಿಯಾಗಿದ್ದರು. ಕುಟುಂಬದ ನಿರ್ವಹಣೆಗೆ ಆಧಾರವಾಗಿದ್ದ ಅವರು ಅಕಾಲಿಕ ಮರಣಕ್ಕೆ ಒಳಗಾಗಿದ್ದರು. ಇದರಿಂದ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಕೋರಿ ಮೃತರ ಪುತ್ರಿ ಭುವನೇಶ್ವರಿ ವಿ. ಪುರಾಣಿಕ್ 2017ರ ಮೇ 22ರಂದು ಮನವಿ ಪತ್ರ ಸಲ್ಲಿಸಿದ್ದರು. ಅದನ್ನು ತಿರಸ್ಕರಿಸಿದ್ದ ಕೃಷಿ ಮಾರುಕಟ್ಟೆ ಇಲಾಖೆ ಜಂಟಿ ನಿರ್ದೇಶಕರು, ವಿವಾಹ ಆಗಿರುವುದರಿಂದ ಅನುಕಂಪದ ಉದ್ಯೋಗ ನೀಡಲಾಗದು ಎಂದು ತಿಳಿಸಿ 2017ರ ಆ.8ರಂದು ಆದೇಶಿಸಿದ್ದರು. ಈ ಆದೇಶ ರದ್ದು ಮಾಡುವಂತೆ ಕೋರಿ ಭುವನೇಶ್ವರಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್, ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ನೇಮಕಾತಿ) ಅಧಿನಿಯಮದ 1996ರ ನಿಯಮ 2(1)(ಎ)(ಐ), ನಿಯಮ 2(1)(ಬಿ) ಮತ್ತು 3 (2)(ಐ)(ಸಿ) ಅಕ್ರಮ ಮತ್ತು ಅಸಂವಿಧಾನಿಕ ಎಂದು ಘೋಷಿಸಿದೆ. ಜತೆಗೆ, ಈ ನಿಯಮಗಳಲ್ಲಿ ಅವಿವಾಹಿತ ಎಂಬ ಪದವನ್ನು ರದ್ದುಪಡಿಸುವುದರ ಜೊತೆಗೆ ಅನುಕಂಪದ ಉದ್ಯೋಗಕ್ಕಾಗಿ ಅರ್ಜಿದಾರರ ಕ್ಲೇಮನ್ನು ಮತ್ತೆ ಪರಿಗಣಿಸಬೇಕು. ಮರು ಪರಿಗಣಿಸಿದ ನಂತರ ಈ ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಒಂದು ತಿಂಗಳಲ್ಲಿ ಕಾನೂನು ಪ್ರಕಾರ ಆದೇಶ ಹೊರಡಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.