ಬೆಂಗಳೂರು: "ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಚುರುಕಾಗಿ ನಡೆಯಬೇಕಿದ್ದು, ನಾವು ದಾಪುಗಾಲಿಡಲು ನಿರ್ಧರಿಸಿದ್ದೇವೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯದಲ್ಲೇ ಉದ್ಯಮಿಗಳೊಂದಿಗೆ ಚರ್ಚಿಸಲು ಒಪ್ಪಿಕೊಂಡಿದ್ದಾರೆ" ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಇಂದು ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಏರ್ಪಡಿಸಿದ್ದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ''ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಬಲ ತುಂಬಬೇಕಾಗಿದೆ. ಈ ನಿಟ್ಟಿನಲ್ಲಿ 'ಕಾಮನ್ ಫೆಸಿಲಿಟೀಸ್ ಸೆಂಟರ್ಗಳನ್ನು ಸ್ಥಾಪಿಸಿ, ಒದಗಿಸಲು ಈಗಾಗಲೇ ಟಾಟಾ ಕನ್ಸಲ್ಟೆನ್ಸಿ ಜೊತೆ ವಿಚಾರ ವಿನಿಮಯ ನಡೆಸಲಾಗಿದೆ. ಇದರಲ್ಲಿ ಆ ಸಂಸ್ಥೆ ಶೇಕಡ 70 ಮತ್ತು ರಾಜ್ಯ ಸರಕಾರ ಶೇಕಡ 30ರಷ್ಟು ಬಂಡವಾಳ ಹೂಡಲಿವೆ'' ಎಂದು ತಿಳಿಸಿದರು.
''ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಕಾರ್ಯವಿಧಾನವನ್ನು ಸಂಪೂರ್ಣ ಪಾರದರ್ಶಕವನ್ನಾಗಿ ಮಾಡಿ, ಉದ್ಯಮಿಗಳು ಸುಗಮವಾಗಿ ತಮ್ಮ ಚಟುವಟಿಕೆ ನಡೆಸುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಪೂರಕವಾಗಿ ಈಗಾಗಲೇ ಭಾರಿ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ ಏಳು ಆದ್ಯತಾ ವಲಯಗಳನ್ನು ಗುರುತಿಸಿ, ವಿಷನ್ ಗ್ರೂಪ್ ರಚಿಸಲು ಕ್ರಮ ಕೈಗೊಳ್ಳಲಾಗಿದೆ'' ಎಂದು ವಿವರಿಸಿದರು.
ಉದ್ಯಮಿಗಳು 2 & 3ನೇ ಹಂತದ ನಗರಗಳಿಗೆ ಹೋಗಬೇಕು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, "ಬೆಂಗಳೂರಿನ ಜನಸಂಖ್ಯೆ 1.30 ಕೋಟಿ ದಾಟಿದ್ದು, ಒತ್ತಡ ಅನುಭವಿಸುತ್ತಿದೆ. ಜೊತೆಗೆ ಎಲ್ಲ ಉದ್ದಿಮೆಗಳೂ ರಾಜಧಾನಿಯಲ್ಲೇ ಕೇಂದ್ರೀಕೃತಗೊಂಡಿವೆ. ಆದ್ದರಿಂದ ಉದ್ಯಮಿಗಳು ಇನ್ನುಮುಂದೆ 2 ಮತ್ತು 3ನೇ ಹಂತದ ನಗರಗಳತ್ತ ಗಮನ ಹರಿಸಬೇಕು. ಇಂಥವರಿಗೆ ಸರಕಾರವು ವಿಶೇಷ ಪ್ರೋತ್ಸಾಹ, ಸವಲತ್ತುಗಳನ್ನು ಕೊಡಲಿದೆ. ಈ ಮೂಲಕ ಗ್ರಾಮಾಂತರ ಪ್ರದೇಶದ ಯುವಜನರ ಪ್ರತಿಭೆಗೂ ಮನ್ನಣೆ ಕೊಡಬೇಕು" ಎಂದು ಸಲಹೆ ನೀಡಿದರು.
''ಕರ್ನಾಟಕದ ಬೆಳವಣಿಗೆಯಲ್ಲಿ ಇಲ್ಲಿನ ಉದ್ಯಮಿಗಳ ಕೊಡುಗೆ ಅಪಾರ. ಇದೇ ಸ್ಥಳದಲ್ಲಿ 2,000ನೇ ಇಸವಿಯಲ್ಲಿ ಮೊದಲನೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದ್ದೆವು. ರಾಜ್ಯದಲ್ಲಿ ಸುಭದ್ರ ಸರ್ಕಾರ ಆಡಳಿತದಲ್ಲಿ ಇದೆ. ಈ ಸರ್ಕಾರ ಕೈಗಾರಿಕೆಗಳ ಅಭಿವೃದ್ಧಿಗೆ ಎಲ್ಲ ಸಹಕಾರ ನೀಡಲಿದೆ. ಕರ್ನಾಟಕದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಇತರ ವೃತ್ತಿಪರ ಶಿಕ್ಷಣ ನೀಡುವ ಕಾಲೇಜುಗಳು ಇಡೀ ದೇಶಕ್ಕೆ ಮಾದರಿ. ಇಡೀ ದೇಶಕ್ಕೆ ಹೆಚ್ಚು ವೈದ್ಯರನ್ನು ನೀಡುವ ರಾಜ್ಯ ನಮ್ಮದು'' ಎಂದರು.
ಸದೃಢ ಸರ್ಕಾರದಿಂದ ಸದೃಢ ಉದ್ಯೋಗ ಅವಕಾಶ: ''ರಾಜ್ಯದ ಅತ್ಯುತ್ತಮ ಎಂಜಿನಿಯರ್‌ಗಳು ವಿದೇಶಕ್ಕೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಎಂತಹ ಕಂಪನಿಗೆ ಹೋದರೂ ಅತ್ಯುನ್ನತ ಸ್ಥಾನದಲ್ಲಿ ಕನ್ನಡಿಗರು ಇರುತ್ತಾರೆ. ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಆಗಬೇಕು. ಇಲ್ಲಿ ಓದುವ ವೈದ್ಯರು, ಎಂಜಿನಿಯರ್‌ಗಳು ಮೊದಲ ಆದ್ಯತೆಯಾಗಿ ಭಾರತದಲ್ಲೇ ತಮ್ಮ ಸೇವೆ ಸಲ್ಲಿಸಬೇಕು. ಕಾರ್ಮಿಕರನ್ನು ಸದೃಢಗೊಳಿಸಿದರೆ, ಸದೃಢ ಸರ್ಕಾರ ಇರುತ್ತದೆ. ಸದೃಢ ಸರ್ಕಾರದಿಂದ ಸದೃಢ ಉದ್ಯೋಗ ಅವಕಾಶಗಳು ಇರುತ್ತದೆ. ಸದೃಢ ಆರ್ಥಿಕತೆ ಇರುತ್ತದೆ'' ಎಂದು ಹೇಳಿದ್ದಾರೆ.
''ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಕಾಲವದು. ಅಗ ಅಮೆರಿಕದ ಟ್ವಿನ್ ಟವರ್ ಸ್ಫೋಟ ಆದ ಸಂದರ್ಭದಲ್ಲಿ ಅನೇಕ ಕಂಪನಿಗಳು ಭಾರತದತ್ತ ಮುಖ ಮಾಡಿದವು. ಆಗ ಅನೇಕ ದೇಶದ ಪ್ರತಿನಿಧಿಗಳು ಹೇಳಿದ ಮಾತು ಕೇಳಿದರೆ ನಮ್ಮ ರಾಜ್ಯದ ಬಗ್ಗೆ ಹೆಮ್ಮೆ ಎನಿಸುತ್ತದೆ. ನಾವು ಇಡೀ ದೇಶ ಸರ್ವೇ ಮಾಡಿದ್ದೇವೆ, ದೆಹಲಿ, ಹೈದರಾಬಾದ್, ಮಹಾರಾಷ್ಟ್ರ, ಚೆನ್ನೈ ಗಿಂತಲೂ ಕರ್ನಾಟಕ ಉತ್ತಮ ಸ್ಥಳ" ಎಂದರು.
ಪ್ರಶಸ್ತಿ ಪ್ರದಾನ: ಈ ಸಂದರ್ಭದಲ್ಲಿ 12 ವಿಭಾಗಗಳ ಅಡಿ ಒಟ್ಟು 68 ಉದ್ಯಮಿಗಳಿಗೆ 2017-18, 2018-19 ಮತ್ತು 2019-20ನೇ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಬಯೋಕಾನ್, ಟೊಯೋಟಾ ಕಿರ್ಲೋಸ್ಕರ್, ಎಚ್‌ಎಎಲ್, ಮೈಸೂರು ಪೇಂಟ್ಸ್ & ವಾರ್ನಿಶ್, ಜಿ.ಇ. ಇಂಡಿಯಾ ಪ್ರೈವೇಟ್ ಲಿಮಿಟೆಡ್, ಗೋಕಲ್‌ದಾಸ್ ಎಕ್ಸ್‌ಪೋರ್ಟ್ಸ್ ಮುಂತಾದ ಕಂಪನಿಗಳ ಪ್ರತಿನಿಧಿಗಳು ಪುರಸ್ಕಾರಗಳನ್ನು ಸ್ವೀಕರಿಸಿದರು. ಶಾಸಕ ರಿಜ್ವಾನ್ ಅರ್ಷದ್, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಇದ್ದರು.
ಇದನ್ನೂ ಓದಿ: ನೈಸ್ ಹಗರಣದ ತನಿಖೆ ನಡೆಸಲು ಕಾಂಗ್ರೆಸ್ ಕೈಕಟ್ಟಿ ಹಾಕಿತ್ತು ಎಂಬುದು ಸುಳ್ಳು: ಸಿಎಂ ಸಿದ್ದರಾಮಯ್ಯ