ಬೆಂಗಳೂರು: ತಪಾಸಣೆ ನೆಪದಲ್ಲಿ ಹೊರ ರಾಜ್ಯದ ಚಾಲಕರಿಂದ ದಂಡದ ನೆಪದಲ್ಲಿ ರಶೀದಿ ನೀಡದೆ ಅಕ್ರಮವಾಗಿ ಹಣ ಪಡೆದ ಆರೋಪದಡಿ ಹಲಸೂರು ಗೇಟ್ ಸಂಚಾರಿ ಠಾಣೆಯ ಎಎಸ್ಐ ಹಾಗೂ ಹೆಡ್ಕಾನ್ಸ್ಟೇಬಲ್ ಅಮಾನತುಗೊಳಿಸಿ ಟ್ರಾಫಿಕ್ ಕಮಿಷನರ್ ಡಾ. ಬಿ.ಆರ್. ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.
ಇದೇ ತಿಂಗಳು 10ರಂದು ದೇವಾಂಗ ಜಂಕ್ಷನ್ನಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಮಹೇಶ್ ಹಾಗೂ ಹೆಡ್ಕಾನ್ಸ್ಟೇಬಲ್ ಗಂಗಾಧರಪ್ಪ ಅವರು ಕೇರಳ ಮೂಲದ ಸಂತೋಷ್ ಕುಮಾರ್ ಎಂಬಾತನ ಕಾರ್ ತಡೆದು ನಿಲ್ಲಿಸಿದ್ದರು. ಕಾರಿನಲ್ಲಿ ವಾಶ್ ಬೇಸಿನ್ ಇದ್ದ ಕಾರಣ 2,500 ಅಕ್ರಮವಾಗಿ ಸಂತೋಷ್ರಿಂದ ವಸೂಲಿ ಮಾಡಿದ್ದರು ಎನ್ನಲಾಗ್ತಿದೆ. ಹಣ ಪಡೆದುಕೊಂಡಿದಕ್ಕೆ ರಶೀದಿ ಸಹ ನೀಡಿರಲಿಲ್ಲ. ಈ ಸಂಬಂಧ ಇಮೇಲ್ ಮೂಲಕ ನಗರ ಸಂಚಾರಿ ಪೊಲೀಸರಿಗೆ ಸಂತೋಷ್ ದೂರು ನೀಡಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಕರ್ತವ್ಯದ ವೇಳೆ ಪೊಲೀಸರು ಬಾಡಿ ವೋರ್ನ್ ಕ್ಯಾಮರಾ ಧರಿಸದಿರುವುದು ಕಂಡುಬಂದಿತ್ತು. ಮೆಲ್ನೋಟಕ್ಕೆ ಸಿಬ್ಬಂದಿ ನಿರ್ಲಕ್ಷ್ಯತೆ ಹಾಗೂ ದುರ್ನಡತೆ ಆರೋಪದಡಿ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ರವಿಕಾಂತೇಗೌಡ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ನಿತ್ಯಾನಂದ ಆಶ್ರಮದಿಂದ ನನ್ನ ಮಗಳನ್ನು ರಕ್ಷಿಸಿ : ದೂರು ನೀಡಿದ ಬೆಂಗಳೂರಿನ ವ್ಯಕ್ತಿ