ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿದ ಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ಸಾಧ್ಯತೆಯಿದೆ.
ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರ ಪೋನ್ ಕದ್ದಾಲಿಕೆ ಪ್ರಕರಣವನ್ನು ತನಿಖೆ ನಡೆಸಿ ವರದಿಯನ್ನು ರಾಜ್ಯ ಡಿಜಿ ಹಾಗೂ ಐಜಿಪಿ ನೀಲಮಣಿ ಎನ್.ರಾಜು ಅವರಿಗೆ ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೀಡಿದ್ದರು.
ವರದಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕಾಗಿದೆ. ಪ್ರತಿ ದಿನ ಅವರಿಗೆ ವರದಿ ಮಾಡುವ ಸಂದಿಗ್ನ ಪರಿಸ್ಥಿತಿಯಿದೆ. ಹೀಗಾಗಿ ಪ್ರಕರಣದ ತನಿಖೆಯಿಂದ ನನ್ನನ್ನು ಮುಕ್ತಿಗೊಳಿಸಿ, ಬೇರೆ ಯಾರಾದರೂ ಹಿರಿಯ ಪೊಲೀಸ್ ಅಧಿಕಾರಿ ಅಥವಾ ತನಿಖಾ ಸಂಸ್ಥೆಗೆ ವಹಿಸಿ ಎಂದು ಡಿಜಿ ಬಳಿ ಸಂದೀಪ್ ಪಾಟೀಲ್ ಮನವಿ ಪತ್ರ ಸಲ್ಲಿಸಿದ್ದಾರೆ.
ಸ್ವತಃ ಆಯುಕ್ತರಾದ ಭಾಸ್ಕರ್ ರಾವ್ ಮೇಲೆ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಹಿರಿಯ ಎಡಿಜಿಪಿ ಅಥವಾ ಡಿಜಿ ದರ್ಜೆ ಅಧಿಕಾರಿಗಳೇ ತನಿಖೆ ನಡೆಸಬೇಕು. ಅಥವಾ ಸಿಐಡಿ ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕಿದೆ. ಮೂರನೇ ಆಯ್ಕೆಯಾಗಿ ನಿವೃತ್ತ ಡಿಜಿ ಅಥವಾ ಎಡಿಜಿಪಿ ನೇತೃತ್ವದಲ್ಲಿ ತನಿಖೆಯಾಗಬೇಕು. ಆದರೆ ಇದಕ್ಕೆ ಗೃಹ ಇಲಾಖೆಯ ಅನುಮತಿ ಕಡ್ಡಾಯವಾಗಿದೆ. ಸದ್ಯ ಬೆಳವಣಿಗೆ ನೋಡುವುದಾದರೆ ಪ್ರಕರಣವು ಸಿಐಡಿಗೆ ಹಸ್ತಾಂತರ ಮಾಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.