ಬೆಂಗಳೂರು : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೇಲೆ ವಿದ್ಯುತ್ ತಂತಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜು ಬಳಿ ಇಂದು ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಕಾಲೇಜು ವಿದ್ಯಾರ್ಥಿನಿ ಪ್ರಿಯಾ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿನಿ ಇಲ್ಲಿನ ಕಾಲೇಜಿನಿಂದ ಹಿಂತಿರುಗುವಾಗ ಅವಘಡ ಸಂಭವಿಸಿದೆ.
ನಗರದ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜಿನಿಂದ ಪ್ರಿಯಾ ವಾಪಸಾಗುತ್ತಿದ್ದಳು. ವಾಟರ್ ಟ್ಯಾಂಕರ್ನ ಚಕ್ರಕ್ಕೆ ವಿದ್ಯುತ್ ಕಂಬದಲ್ಲಿದ್ದ ಟೆಲಿಫೋನ್ ಕೇಬಲ್ ಸಿಲುಕಿಕೊಂಡಿದೆ. ಇದನ್ನು ಗಮನಿಸದ ಟ್ಯಾಂಕರ್ ಚಾಲಕ ವಾಹನ ಚಲಾಯಿಸಿದ್ದು, ವಿದ್ಯುತ್ ಕಂಬ ನೆಲಕ್ಕೆ ಉರುಳಿಬಿದ್ದಿದೆ. ಆಗ ಅದೇ ದಾರಿಯಲ್ಲಿ ಬರುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಕಂಬದ ತಂತಿಗಳು ಬಿದ್ದಿವೆ. ಈ ವೇಳೆ ವಿದ್ಯುತ್ ಪ್ರವಹಿಸಿರುವುದರಿಂದ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಆಕೆಯನ್ನು ಸಾಗರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿದ್ಯಾರ್ಥಿನಿಯ ಮುಖ ಮತ್ತು ದೇಹದ ಭಾಗಗಳಿಗೆ ಶೇ.40ರಷ್ಟು ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಸಾಗರ್ ಆಸ್ಪತ್ರೆಯಿಂದ ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಬಳಿಕ ಬೆಸ್ಕಾಂ ಸಿಬ್ಬಂದಿ ಆಗಮಿಸಿ ಶಿಥಿಲಗೊಂಡಿರುವ ಕಂಬವನ್ನು ತೆರವುಗೊಳಿಸಿದ್ದಾರೆ. ವೈರ್ ಎಳೆದು ಬೀಳುವಷ್ಟರ ಮಟ್ಟಿಗೆ ಲೈಟ್ ಕಂಬ ಶಿಥಿಲಗೊಂಡಿದೆ ಎಂದರೆ ಬೆಸ್ಕಾಂ ಎಷ್ಟರ ಮಟ್ಟಿಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ವಿದ್ಯುತ್ ಅವಘಡ ಪ್ರಕರಣ : ಜಮೀನಿನಲ್ಲಿ ವಿದ್ಯುತ್ ಶಾಕ್ ತಗುಲಿ ತಂದೆ ಮತ್ತು ಮಗಳು ಸಾವನ್ನಪ್ಪಿದ್ದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಕಳೆದ ಜುಲೈ ತಿಂಗಳಲ್ಲಿ ನಡೆದಿತ್ತು. ಮೃತರನ್ನು ಬಸವನಹಳ್ಳಿಯ ರಾಮಕೃಷ್ಣ ರೆಡ್ಡಿ (65) ಹಾಗೂ ಮಗಳು ನಿರ್ಮಲ (45) ಎಂದು ಗುರುತಿಸಲಾಗಿತ್ತು.
ಮೃತ ರಾಮಕೃಷ್ಣ ರೆಡ್ಡಿ ಅವರು ಮಡಕಶಿರಾ ತಾಲೂಕಿನ ಎಲ್ಲೊಟಿಯಲ್ಲಿರುವ ತಮ್ಮ ಹೊಲದಲ್ಲಿ ನೀರು ಹಾಯಿಸಲು ತೆರಳಿದ್ದರು. ಈ ವೇಳೆ ಕೊಳವೆ ಬಾವಿಯ ಬಳಿ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ತಂದೆ ಬರುವುದು ತಡವಾದ್ದರಿಂದ ಹೊಲಕ್ಕೆ ಹುಡುಕಿಕೊಂಡು ಬಂದ ಮಗಳು ತಂದೆಯನ್ನು ಮುಟ್ಟಿದ್ದು, ಅವರು ಕೂಡ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : Heart attack: ಆಟೋ ಚಾಲನೆ ವೇಳೆ ದಿಢೀರ್ ಎದೆನೋವು.. ಚಾಲಕ ಸ್ಥಳದಲ್ಲೇ ಸಾವು